ಜಿಲ್ಲೆ

ಕಾಡಾ ಸಭೆಗೆ ಸಚಿವರ ನಿರ್ಧಾರ ಪ್ರಕಟ   ಭಾರತೀಯ ರೈತ ಒಕ್ಕೂಟ ಅಸಮಾಧಾನ

ಡಿ. ಎಂ. ಮಹೇಶ್

ದಾವಣಗೆರೆ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಆ.5ರಂದು ಕಾಡಾ ಸಭೆ ಕರೆಯಲು ತೀರ್ಮಾನರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗುರುವಾರ ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಈ ಕೂಡಲೇ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಎಚ್.ಆರ್. ಲಿಂಗರಾಜ್ ಮಾತನಾಡಿ, ಜುಲೈ ಕೊನೆಗೆ ಭದ್ರಾ ಡ್ಯಾಂ ಭರ್ತಿಯಾಗಿ ನೀರು ನದಿಗೆ ಹರಿದು ಹೋಗಲಿದ್ದು, ಇದು ಯಾರಿಗೆ ಪ್ರಯೋಜನ? ಎಂದು ಪ್ರಶ್ನಿಸಿದರು.
ಭದ್ರಾ ನಾಲೆಗೆ ಇಂದಿನಿಂದಲೇ ನೀರು ಹರಿಸಿದರೆ ಅಚ್ಚುಕಟ್ಟು ಪ್ರದೇಶದ ಕೆರೆಗಳು ತುಂಬುವುದಲ್ಲದೆ, ಭತ್ತದ ನಾಟಿ ಕಾರ್ಯ ಭರದಿಂದ ನಡೆಯುತ್ತಿದ್ದವು. ತಡವಾಗಿ ನೀರು ಬಿಟ್ಟರೆ ನವೆಂಬರ್‌ನಲ್ಲಿ ಮೂಡಗಾಳಿಗೆ ಭತ್ತ ಜೊಳ್ಳಾಗಿ ಇಳುವರಿ ಕಡಿಮೆಯಾಗಲಿದೆ ಎಂದರು.
ಒಕ್ಕೂಟದಿಂದ ನಗರದಲ್ಲಿ ಸೋಮವಾರ ರೈತರ ಸಭೆ ನಡೆಸಿ ಕೂಡಲೇ ಕಾಲುವೆಗೆ ನೀರು ಹರಿಸಬೇಕೆಂಬ ತೀರ್ಮಾನ ಕೈಗೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಅವರೂ ರೈತರೊಂದಿಗೆ ಸಭೆ ನಡೆಸಿ ಜಿಲ್ಲಾ ಸಚಿವರಿಗೆ ವಸ್ತುಸ್ಥಿತಿ ವಿವರಿಸಿದಾಗ ನೀರಾವರಿ ನಿಗಮದ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದರು.
ಆದರೆ, ನಿಗಮದ ಸಭೆಯಲ್ಲಿ ಆಗಸ್ಟ್‌ನಲ್ಲಿ ಕಾಡಾ ಸಭೆ ನಡೆಸಲು ತೀರ್ಮಾನಿಸಿರುವುದು ಸರಿಯಲ್ಲ. ಅಲ್ಲದೇ ಮಳೆಗಾಲದಲ್ಲಿ ಬೆಳೆ ಬೆಳೆದ ನಂತರವೂ ಡ್ಯಾಂ ನೀರು 186 ಅಡಿಗೆ ನಿಲ್ಲುತ್ತದೆ. ಸಚಿವರ ನಿರ್ಣಯದಿಂದ ಕುಡಿಯುವ ನೀರು ಮತ್ತು ಬೇಸಿಗೆ ಬೆಳೆಗೆ ತೊಂದರೆಯಾದರೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಸಸಿ ಬೆಳೆಸಿಕೊಂಡು ನಾಟಿ ಮಾಡಲು ಹಾಗೂ ಇನ್ನೂ ಕೆಲವರು ಸಸಿಮಡಿ ಮಾಡಿಕೊಳ್ಳಲು ನೀರು ಬಿಡುವುದನ್ನೇ ಕಾಯುತ್ತಿದ್ದಾರೆ. ಕೂಡಲೇ ನಾಲೆ ನೀರು ಬಿಡುವ ವ್ಯವಸ್ಥೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗರಾಜ್‌ರಾವ್ ಕೊಂಡಜ್ಜಿ, ಎ.ಎಂ. ಮಂಜುನಾಥ್, ಕುಂದುವಾಡ ಮಹೇಶ್ವರಪ್ಪ, ಎ.ಬಿ. ಕರಿಬಸಪ್ಪ ಮತ್ತಿತರರಿದ್ದರು.