ಜಿಲ್ಲೆ

ಮಧ್ಯಾಹ್ನದ ಬಿಸಿಯೂಟ ಶುರು  ದಾವಣಗೆರೆಯ 796 ಕೇಂದ್ರಗಳಲ್ಲಿ ಸಿದ್ಧತೆ  61159 ವಿದ್ಯಾರ್ಥಿಗಳ ಸಮ್ಮತಿ

ಡಿ. ಎಂ. ಮಹೇಶ್

ಡಿ.ಎಂ.ಮಹೇಶ್, ದಾವಣಗೆರೆ:

ಬೇಸಿಗೆ ರಜಾದಿನದಲ್ಲೂ ಕೆಲ ಶಾಲೆಗಳಲ್ಲಿ ಚಿಣ್ಣರ ಸಪ್ಪಳ ಶುರುವಾಗಿದೆ! ಕೆಲವು ಕೇಂದ್ರಗಳಲ್ಲಿ ಭೋಜನಕ್ಕೂ ಮುನ್ನ ಅನ್ನದೇವನಿಗೆ ವಿಶೇಷ ಪ್ರಾರ್ಥನೆಯೂ ಮೊಳಗುತ್ತಿದೆ.
ರಾಜ್ಯ ಸರ್ಕಾರದ ಸೂಚನೆಯಂತೆ ಬರಪೀಡಿತ ಜಿಲ್ಲೆಗಳಲ್ಲಿ ಒಂದಾದ ದಾವಣಗೆರೆ ಜಿಲ್ಲೆಯ ಆಯ್ದ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಗುರುವಾರ ಚಾಲನೆಗೊಂಡಿದೆ.
ಒಂದರಿಂದ ಹತ್ತನೇ ತರಗತಿ ವರೆಗಿನ 61159 ಮಕ್ಕಳು ಊಟ ಮಾಡಲು ಆಸಕ್ತರಿದ್ದು, ಪಾಲಕರಿಂದ ಒಪ್ಪಿಗೆ ಪತ್ರ ಪಡೆಯಲಾಗಿದೆ. ಪಾತ್ರೆ-ಪರಿಕರ, ಆಹಾರಧಾನ್ಯಗಳೊಂದಿಗೆ ಬಿಸಿಯೂಟ ತಯಾರಿಕೆಗೆ ಜಿಲ್ಲೆಯ 796 ಅಡುಗೆ ಕೇಂದ್ರಗಳು ಸಜ್ಜಾಗಿವೆ. ಗುರುವಾರ ಮಕ್ಕಳ ಹಾಜರಾತಿ ಕಡಿಮೆ ಇತ್ತು. ಶುಕ್ರವಾರ 21608 ಮಕ್ಕಳು ಊಟ ಸವಿದಿದ್ದಾರೆ.
ಮಾ.11ರ ರಂಜಾನ್ ಹಬ್ಬದ ದಿನದಂದೇ ಚಾಲನೆಗೊಂಡ ಈ ಕಾರ್ಯಕ್ರಮ, ಭಾನುವಾರಗಳಂದು ಹೊರತುಪಡಿಸಿ ಮೇ 28ರವರೆಗೆ ಒಟ್ಟು ನಲವತ್ತೊಂದು ದಿನಗಳ ಕಾಲ ನಡೆಯಲಿದೆ. ಬಿಸಿಲಿನ ದಾಹ ತಣಿಸಿಕೊಳ್ಳಲು ಕೆಲ ಚಿಣ್ಣರು ನೀರಿನ ಬಾಟಲುಗಳೊಂದಿಗೆ ಶಾಲೆಗೆ ದಾಂಗುಡಿ ಇಡುತ್ತಿದ್ದಾರೆ.
ಪಿಎಂ ಪೋಷಣ್ ಶಕ್ತಿ ನಿರ್ಮಾಣ್- ಅಕ್ಷರದಾಸೋಹ ಕಾರ್ಯಕ್ರಮದಡಿ ಎರಡು ತಿಂಗಳಿಗ ಲಭ್ಯವಾಗುವಷ್ಟು ಆಹಾರಧಾನ್ಯವನ್ನು  ಆಯಾ ಕೇಂದ್ರಗಳಿಗೆ ರವಾನಿಸಲಾಗಿದೆ. ಒಟ್ಟು 7516 ಕ್ವಿಂ ಅಕ್ಕಿ, 1150 ಕ್ವಿಂ. ಗೋಧಿ, 1210 ಕ್ವಿಂ ತೊಗರಿಬೇಳೆ, 41,328 ಲೀ. ಸೂರ್ಯಕಾಂತಿ ಎಣ್ಣೆ ಪೂರೈಸಲಾಗಿದೆ.
ಅಡುಗೆ ಕೇಂದ್ರಕ್ಕೆ ಒಬ್ಬರಂತೆ ಮುಖ್ಯ ಶಿಕ್ಷಕರು ಉಸ್ತುವಾರಿ ವಹಿಸಲಿದ್ದಾರೆ. 250ಕ್ಕೂ ಹೆಚ್ಚು ಮಕ್ಕಳಿರುವ ಕೇಂದ್ರಗಳಲ್ಲಿ ಒಟ್ಟು 23 ಮಂದಿ ನೋಡಲ್ ಶಿಕ್ಷಕರನ್ನು ನೇಮಿಸಲಾಗಿದೆ. ಹೊನ್ನಾಳಿ ತಾಲೂಕಿನಲ್ಲಿ 9, ಹರಿಹರದಲ್ಲಿ 7, ದಾವಣಗೆರೆ ಉತ್ತರದಲ್ಲಿ ಐವರು ಹಾಗೂ ದಕ್ಷಿಣದಲ್ಲಿ ಇಬ್ಬರು ನೋಡಲ್ ಶಿಕ್ಷಕರಿದ್ದಾರೆ.
 ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮುಖ್ಯ ಅಡುಗೆಯವರು ಹಾಗೂ ಸಹಾಯಕಿಯರು ಸೇರಿ 1753 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಮುಖ್ಯ ಶಿಕ್ಷಕರು ಆಯಾ ದಿನದ ತರಕಾರಿಯನ್ನು ಖರೀದಿಸಲಿದ್ದು, ಅವರು ಹಾಗೂ ಎಸ್‌ಡಿಎಂಸಿ ಖಾತೆಗೆ ಅಕ್ಷರದಾಸೋಹ ಕಚೇರಿಯಿಂದ ಜಮೆ ಮಾಡಲಾದ ಮೊತ್ತವನ್ನು 15 ದಿನದಿಂದ 1 ತಿಂಗಳಿಗೊಮ್ಮೆ ಡ್ರಾ ಮಾಡಿಕೊಳ್ಳಲು ಅವಕಾಶವಿದೆ.
1-5ನೇ ತರಗತಿವರೆಗಿನ ಮಕ್ಕಳಿಗೆ ದಿನಕ್ಕೆ 100 ಗ್ರಾಂ ಅಕ್ಕಿ/ ಗೋಧಿ, 20 ಗ್ರಾಂ ತೊಗರಿಬೇಳೆ, 5 ಗ್ರಾಂ. ಎಣ್ಣೆ, 6ರಿಂದ 10ನೇ ತರಗತಿಯವರಿಗೆ  150 ಗ್ರಾಂ. ಅಕ್ಕಿ/ ಗೋಧಿ, 30 ಗ್ರಾಂ ತೊಗರಿಬೇಳೆ, 7.5 ಗ್ರಾಂ ಎಣ್ಣೆ ನೀಡುವ ಸೂಚನೆ ಇದೆ. ಅದರನ್ವಯ ಮಕ್ಕಳಿಗೆ ಊಟ ಬಡಿಸಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.
ಪತ್ರಮುಖೇನ ಮನವಿ ಮಾಡಿದಂತೆ ತಾಪಂ ಇಒ, ಪಿಡಿಒಗಳು ಅಡುಗೆ ಕೇಂದ್ರಗಳಿಗೆ ಸ್ವಚ್ಛತೆೆ ಹಾಗೂ ಕುಡಿಯಲು ಅಗತ್ಯ ನೀರು ಪೂರೈಸುತ್ತಿದ್ದಾರೆ. ಊಟದಲ್ಲಿ ಶುಚಿ ಮತ್ತು ರುಚಿಯನ್ನು ಆಯಾ ಮುಖ್ಯ ಶಿಕ್ಷಕರೇ ಪರೀಕ್ಷಿಸಿ ಮಕ್ಕಳಿಗೆ ನೀಡುತ್ತಿದ್ದಾರೆ. ಆಯಾ ಕೇಂದ್ರಗಳು ಮಕ್ಕಳಿಗೆ ನೀಡಿದ ಊಟದ ವಹಿ ದಾಖಲಿಸಲಾಗುತ್ತದೆ. ಮಕ್ಕಳ ಸುರಕ್ಷತೆ ಬಗ್ಗೆಯೂ ನಿಗಾ ವಹಿಸುವ ಸೂಚನೆಯೂ ಇದೆ.
ಆಯಾ ಕೇಂದ್ರಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಊಟದ ರುಚಿ-ಶುಚಿ ಎರಡರ ರ‌್ಯಾಂಡಮ್ ಪರೀಕ್ಷೆ ನಡೆಸಲಿದ್ದಾರೆ. ಕೂಲಿಕಾರ್ಮಿಕರು ತಮ್ಮ ಜತೆ ಮಕ್ಕಳನ್ನೂ ಕರೆದೊಯ್ಯುತ್ತಿದ್ದು, ಬಿಸಿಯೂಟಕ್ಕೆ ಹಾಜರಾತಿ ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

---------------------------
ವಿಧಾನಸಭಾ ಕ್ಷೇತ್ರ  ಕೇಂದ್ರ ಮಕ್ಕಳು ಅಡುಗೆಯವರು
-------------------------
ದಾವಣಗೆರೆ ಉತ್ತರ 114    9392   238
ದಾವಣಗೆರೆ ದಕ್ಷಿಣ     84    5319   159
ಹರಿಹರ                    85    8450   191
ಹೊನ್ನಾಳಿ               126  10975   280
ಚನ್ನಗಿರಿ                 215  13209   528
ಜಗಳೂರು             172  13814   357
------------------------
ಒಟ್ಟು                   796   61159  1753
----------------------

ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳ ಬರುವಿಕೆ ಇನ್ನಷ್ಟೆ ಚುರುಕಾಗಬೇಕಿದೆ. ಸೋಮವಾರದಿಂದ ಪ್ರಮಾಣ ಹೆಚ್ಚಬಹುದು. ಬೇರೆ ಜಿಲ್ಲೆ, ತಾಲೂಕಿನ ಮಕ್ಕಳೂ ತಮ್ಮ ಶಾಲೆಯ ಮಾಹಿತಿ, ಪಾಲಕರ ಒಪ್ಪಿಗೆ ಪತ್ರದೊಂದಿಗೆ ಬಿಸಿಯೂಟ ಪಡೆಯಲು ಅವಕಾಶವಿದೆ.
ಡಿ. ದುರುಗಪ್ಪ
ಶಿಕ್ಷಣಾಧಿಕಾರಿ, ಅಕ್ಷರದಾಸೋಹ ಕಾರ್ಯಕ್ರಮ, ಜಿಪಂ.
---
ನಮ್ ಶಾಲೇಲಿ ನಿನ್ನೆ ಪಾಯಸ ಮಾಡಿದ್ರು. ಇವತ್ತು ಬಿಸಿಬೇಳೆಬಾತ್ ಇತ್ತು. ಫ್ರೆಂಡ್ಸ್ ಜತೆ ಹೋಗಿದ್ದೆ. ಕೇರಂ ಆಟವಾಡಿ, ಊಟ ಮಾಡಿ ಬಂದ್ವಿ. ಊಟ ಚೆನ್ನಾಗಿತ್ತು ಸರ್.
ಎಂ. ಮಣಿಕಂಠ
ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ.