ದಾವಣಗೆರೆ: ನಗರಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶ ಅನುಷ್ಠಾನದಲ್ಲಿ ನಾಗರಿಕರಿಗೆ ಆಗುತ್ತಿರುವ ವಿಳಂಬ ತಪ್ಪಿಸುವಂತೆ ಆಗ್ರಹಿಸಿ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯರ ಒಕ್ಕೂಟ ಸೋಮವಾರ, ಪಾಲಿಕೆ ಆಯುಕ್ತೆ ರೇಣುಕಾ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯರು ವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿದರು. ಸರಳೀಕರಣದ ಜತೆಗೆ ನಾಗರಿಕರಿಗೆ ಉತ್ತಮ ಸೇವೆ ನೀಡಲೆಂದೇ ಪಾಲಿಕೆಯಲ್ಲಿ ಇ-ಅಸ್ತಿ ತಂತ್ರಾಂಶ ಅನುಷ್ಠಾನಗೊಳಿಸಲಾಗುತ್ತಿದೆ. ವಾರ್ಡ್‌ಗಳ ಸ್ವತ್ತುಗಳನ್ನು ಇ-ಆಡಳಿತ ತಂತ್ರಾಂಶದಲ್ಲಿಯೂ ಸಹ ಅಧಿಕೃತ ಅಸ್ತಿಗಳೆಂದೇ ಪರಿಗಣಿಸಿ, ಅವುಗಳನ್ನೇ ಅಪ್‌ಲೋಡ್ ಮಾಡಿಕೊಂಡು ಅಧಿಕೃತಗೊಳಿಸಿ, ಇ-ಆಸ್ತಿ ತಂತ್ರಾಂಶ ಆಖೈರುಗೊಳಿಸಬೇಕಿದೆ ಎಂದರು.
ಸ್ವತ್ತಿನ ಮಾಲೀಕರು ನಿಗದಿತ ಆಸ್ತಿ ಶುಲ್ಕ, ಒಳಚರಂಡಿ, ಘನತ್ಯಾಜ್ಯ ಶುಲ್ಕ, ನೀರಿನ ಕಂದಾಯ ಕಟ್ಟಿದ್ದು ಇವೆಲ್ಲದರ ದಾಖಲೆಗಳನ್ನು ಕಾಯ್ದಿರಿಸುವುದು ಕಂದಾಯ ಶಾಖೆಯ ಕರ್ತವ್ಯವಾಗಿದೆ. ಇವನ್ನು ಇ-ತಂತ್ರಾಂಶಕ್ಕೆ ಅಳವಡಿಸಿ ಇ-ಸ್ವತ್ತಿನ ನಮೂನೆಯನ್ನು ಸ್ವತ್ತಿನ ಮಾಲೀಕರಿಗೆ ನೀಡಬೇಕು. ತೆರಿಗೆ ಶುಲ್ಕ ನೀಡದವರಿಗೆ ನೋಟಿಸ್ ನೀಡಬೇಕಿದೆ.
ಪಾಲಿಕೆಯಲ್ಲಿ, ಪ್ರಾಧಿಕಾರದಿಂದ ಪಡೆದ ಬಡಾವಣೆ ಅನುಮೋದನೆ ಪತ್ರ ಹಾಗೂ ನಕ್ಷೆಗಳಿದ್ದು ಅವುಗಳನ್ನೇ ಇ-ತಂತ್ರಾಂಶಕ್ಕೆ ಅಳವಡಿಸಿ, ಇ-ಆಸ್ತಿ ನಮೂನೆ-2 ನೀಡಬೇಕು. ಆಸ್ತಿಯು ಕಟ್ಟಡವಾಗಿದ್ದಲ್ಲಿ ಅದರ ಫೋಟೋವನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದು ಹೇಳಿದರು.
ಆಸ್ತಿಯು ನಿವೇಶನವಾಗಿದ್ದಲ್ಲಿ ಪ್ರಮುಖ ಸ್ಥಳ ಒಳಗೊಂಡಿರುವ ನಿವೇಶನದ ಫೋಟೋವನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು. ಪ್ರಮುಖ ಸ್ಥಳ ಇಲ್ಲದಿದ್ದಲ್ಲಿ ಮಾಲೀಕರು ನಿವೇಶನದಲ್ಲಿ ನಿಂತಿರುವ ಫೋಟೋ ಜತೆಗೆ ಮಾಲೀಕರ ಭಾವಚಿತ್ರ ಪ್ರತ್ಯೇಕವಾಗಿ ಅಳವಡಿಸಬೇಕು. ಆದರೆ, 2001-02ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿದ ದಾಖಲೆಗಳನ್ನು ಕೇಳುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇ-ಸ್ವತ್ತು ನಮೂನೆ ಸರಳೀಕರಿಸಿ ಇ-ಆಸ್ತಿ ನಮೂನೆ-2 ನೀಡಬೇಕು. ಅದನ್ನು ಬಿಟ್ಟು ಇ-ಸ್ವತ್ತು ನೀಡುವಾಗ ಆಸ್ತಿ ಮಾಲೀಕರಿಗೆ ತೊಂದರೆ ನೀಡುವುದು ಸರಿಯಲ್ಲ. ಇದುವರೆಗೂ ಸರ್ವೆ ಮಾಡದೆ ಪ್ರತಿ ದಾಖಲೆಗಳನ್ನು ಆಸ್ತಿ ಮಾಲೀಕರಿಂದಲೇ ಮತ್ತೊಮ್ಮೆ ಪಡೆಯುವ ವ್ಯರ್ಥ ಪ್ರಯತ್ನವೇಕೆ? ಇ-ಸ್ವತ್ತಿನ ಉದ್ದೇಶವನ್ನು ಸರಳೀಕರಣಗೊಳಿಸದೆ ಇನ್ನಷ್ಟು ಕ್ಲಿಷ್ಟ ಮಾಡುವ ಮರ್ಮಮೇನು ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಕೂಡಲೆ ಇದರ ಬಗ್ಗೆ ಗಮನಹರಿಸಬೇಕು.ಇ-ಆಸ್ತಿ - ತಂತ್ರಾಂಶ ಅನುಷ್ಠಾನ ವಿಳಂಬ ಹಾಗೂ ಆಸ್ತಿ ಮಾಲೀಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಇಲ್ಲವಾದಲ್ಲಿ ಹೋರಾಟಗಳು ಅನಿವಾರ್ಯವಾಗಲಿವೆ ಎಂದು ಎಚ್ಚರಿಸಿದರು.
ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್‌ಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ಸುಧಾ ಜಯರುದ್ರೇಶ್, ಎಚ್. ಎನ್. ಶಿವಕುಮಾರ್. ರಮೇಶ್ ಶಿವನಹಳ್ಳಿ, ಎಚ್.ಎನ್. ಗುರುನಾಥ್, ಎಂ.ಎಸ್.ವಿಠ್ಠಲ್, ಆವರಗೆರೆ ಸುರೇಶ್, ವಸಂತ್‌ಕುಮಾರ್, ಕೃಷ್ಣಮೂರ್ತಿ ಪವಾರ್, ಶಿವರಾಜ್ ಪಾಟೀಲ್, ಮುಖಂಡರಾದ ಸತೀಶ್ ಕೊಳೇನಹಳ್ಳಿ, ರಮೇಶನಾಯ್ಕ, ಪಾಲಿಕೆ ಸದಸ್ಯರಾದ ಜ್ಯೋತಿ ಶಿವರಾಜ್ ಪಾಟೀಲ್, ವೀರೇಶ್ ಪೈಲ್ವಾನ್ ಇದ್ದರು.
----