ಜಿಲ್ಲೆ

ರಾಜ್ಯೋತ್ಸವ ಸಭೆ ಮುಂದೂಡಿಕೆಗೆ ಆಕ್ರೋಶ, ಬಹಿಷ್ಕಾರ

ಡಿ. ಎಂ. ಮಹೇಶ್

ದಾವಣಗೆರೆ: ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನು ನಿಗದಿತ ಸಮಯದಲ್ಲಿ ನಡೆಸದೆ ತಾಲೂಕು ನಾಡಹಬ್ಬಗಳ ಸಮಿತಿ ಮೂರುಬಾರಿ ಮುಂದೂಡಿದೆ. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ ಕನ್ನಡ ಹಿತ ರಕ್ಷಣಾ ಸಮಿತಿ ಪದಾಧಿಕಾರಿಗಳು ಸೋಮವಾರ ಚನ್ನಗಿರಿಯಲ್ಲಿ ಸಭೆ ಬಹಿಷ್ಕರಿಸಿ ಹೊರಬಂದರು.
ಕನ್ನಡ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಮಾತನಾಡಿ, ತಾಲೂಕು ನಾಡಹಬ್ಬಗಳ ಸಮಿತಿ ರಾಜ್ಯೋತ್ಸವ ಸಭೆಯನ್ನು ಮಧ್ಯಾಹ್ನ 3 ಗಂಟೆಗೆ ಕರೆದು 5 ಗಂಟೆಯಾದರೂ ಒಬ್ಬ ಅಧಿಕಾರಿ ಸಭೆಗೆ ಹಾಜರಾಗದೆ ಕೊನೆಯಲ್ಲಿ ಮುಂದೂಡಲಾಗಿದೆ ಎಂಬ ಮಾಹಿತಿ ಕಳುಹಿಸುತ್ತಾರೆ. ಈಗಾಗಲೇ ಎರಡು ಬಾರಿ ವಿವಿಧ ಕಾರಣ ನೀಡಿ ಸಭೆ ಮುಂದೂಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ನಿರ್ಲಕ್ಷೃ ತೋರಿದರೆ ಕನ್ನಡದ ಕಾರ್ಯಕ್ರಮವನ್ನು ಯಾವ ರೀತಿ ಯಶಸ್ವಿಗೊಳಿಸಬೇಕು ಎಂದು ತಿಳಿಯದಾಗಿದೆ. ಕಚೇರಿಯ ತುರ್ತು ಕೆಲಸ ಇದ್ದರೆ ಅದನ್ನು ಮೊದಲೇ ನೋಡಿಕೊಂಡು ಸಮಯ ನಿಗದಿ ಮಾಡಬೇಕು. ಪಟ್ಟಣ ಮತ್ತು ದೂರದ ಗ್ರಾಮದಿಂದ ಕನ್ನಡ ಅಭಿಮಾನಿಗಳು ಸಲಹೆ, ಸೂಚನೆ ನೀಡಲು ಬಂದಿರುತ್ತಾರೆ. ಇದರಿಂದ ಸಮಯ ಮತ್ತು ಹಣ ವ್ಯಯವಾಗಲಿದೆ ಎಂದರು.
ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಸಭೆಗೆ ಆಸಕ್ತಿ ವಹಿಸಿ ಭಾಗವಹಿಸುತ್ತಾರೆ ಮತ್ತು ಸಭೆಯಲ್ಲಿ ಉತ್ತಮ ಸಲಹೆ, ಸೂಚನೆಗಳನ್ನು ನೀಡಲು ತಯಾರಾಗಿ ಬಂದಿರುತ್ತಾರೆ. ಮುಂದೆ ಕರೆಯುವಂಥ ಸಭೆಗೆ ಕನ್ನಡಿಗರು ಗೈರಾದರೆ ಅಧಿಕಾರಿ ವರ್ಗ ಸೇರಿ ಕಾರ್ಯಕ್ರಮ ಆಯೋಜಿಸಬೇಕು. ಇದರಿಂದ ಕನ್ನಡಕ್ಕೆ ಅವಮಾನ ಮಾಡಿದಂತೆ ಎಂದು ಆರೋಪಿಸಿದರು.
ಕನ್ನಡ ಹಿತ ರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಅಣ್ಣೋಜಿರಾವ್, ಗೌರವ ಅಧ್ಯಕ್ಷ ಸರದಾರ್, ನಗರ ಘಟಕ ಅಧ್ಯಕ್ಷ ನಟರಾಜ್ ರಾಯ್ಕರ್, ಮಹಿಳಾ ಅಧ್ಯಕ್ಷರಾದ ಜೋಳದಾಳ್ ಲತಾ, ಲಕ್ಷ್ಮಿ, ಡಿ.ರಮೆಶ್, ಎ.ಎಚ್.ಉಮೇಶ್, ಮಹೇಶ್ವರಪ್ಪ ಇತರರಿದ್ದರು.
---