ದಾವಣಗೆರೆ: ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳ ತಂಡ ದಾವಣಗೆರೆ ಜಿಲ್ಲೆಯ ಎರಡು ಕಡೆ ಗುರುವಾರ ಬೆಳಗಿನಜಾವ ದಾಳಿ ನಡೆಸಿ ಪಿಎಫ್‌ಐ ಸಂಘಟನೆಯ ಪ್ರಮುಖ ಸದಸ್ಯನೊಬ್ಬನನ್ನು ವಶಕ್ಕೆ ಪಡೆದಿದ್ದು ತಲೆಮರೆಸಿಕೊಂಡಿರುವ ಇನ್ನೊಬ್ಬನಿಗೆ ಬಲೆ ಬೀಸಿದೆ.
4 ಗಂಟೆಯ ನಸುಕಿನಲ್ಲಿ ನಗರದ ಎಂಸಿಸಿ ‘ಎ’ ಬ್ಲಾಕ್‌ನಲ್ಲಿರುವ ಪಿಎಫ್‌ಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಇಮಾದುದ್ದೀನ್ ಮನೆ ಬಾಗಿಲು ತಟ್ಟಿದ ಎನ್‌ಐಎ ಅಧಿಕಾರಿಗಳು ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಅಂದರೆ ಬೆಳಗ್ಗೆ 8.30ರವರೆಗೆ ಇಡೀ ಮನೆಯನ್ನೇ ಜಾಲಾಡಿದರು.
ಮಹತ್ವದ ದಾಖಲೆಗಳಿಗೆ ಹುಡುಕಾಟ ನಡೆಸಿದ ಅಧಿಕಾರಿಗಳು ಲ್ಯಾಪ್‌ಟಾಪ್, ಪೆನ್‌ಡ್ರೈವ್, ಮೊಬೈಲ್ ಫೋನ್ ಮತ್ತಿತರ ವಸ್ತುಗಳ ಜತೆಗೆ ಇಮಾದುದ್ದೀನ್ ಅವರನ್ನೂ ವಶಕ್ಕೆ ಪಡೆದರು.
ಇಮಾದುದ್ದೀನ್ ಮೂಲತಃ ಇಂಜನಿಯರ್. ಈ ಮೊದಲು ಬೆಂಗಳೂರಿನ ಯಲಹಂಕದಲ್ಲಿ ಟ್ರಾೃಕ್ಟರ್ ಬಿಡಿ ಭಾಗಗಳ ಉಪ ಗುತ್ತಿಗೆದಾರರಾಗಿ ವ್ಯವಹಾರ ನಡೆಸುತ್ತಿದ್ದರು. ಕರೊನಾ ವೇಳೆ ನಷ್ಟವಾದ ಬಳಿಕ ದಾವಣಗೆರೆಗೆ ಬಂದು ಹಣ್ಣು ಮತ್ತಿತರ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದರು.
ಅಸಾಂವಿಧಾನಿಕ ಕ್ರಮ: ಮನೆ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಯಾವುದೇ ಕಾನೂನುಬದ್ಧ ದಾಖಲೆಗಳನ್ನು ತೋರಿಸದ ಅಧಿಕಾರಿಗಳು ಸಹೋದರನನ್ನು ಹಾಗೂ ಮನೆಯ ಸದಸ್ಯರ ಲ್ಯಾಪ್‌ಟಾಪ್, ಪೆನ್‌ಡ್ರೈವ್, ಕಂಪ್ಯೂಟರ್ ಅನ್ನು ವಶಪಡಿಸಿಕೊಂಡಿದ್ದು ಅಸಾಂವಿಧಾನಿಕ ಕ್ರಮ ಎಂದು ಮಹಮದ್ ಸಾದ್ ದೂರಿದ್ದಾರೆ.
ತಲೆ ಮರೆಸಿಕೊಂಡಿರುವ ತಾಹೀರ್
ಹರಿಹರದ ಪ್ರಶಾಂತ ನಗರದ ನಿವಾಸಿ ತಾಲೂಕು ಪಿಎಫ್‌ಐ ಸಂಘಟನೆ ಕಾರ್ಯದರ್ಶಿ ತಾಹೀರ್ ಹುಸೇನ್ ತಲೆ ಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ. ರಾತ್ರಿ ಹರಿಹರದಲ್ಲಿ ತಾಹಿರ್ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದ ತನಿಖಾ ದಳ ದಾವಣಗೆರೆಯ ವಿನೋಬ ನಗರದಲ್ಲಿರುವ ಆತನ ಸಂಬಂಧಿಕರ ಮನೆಯಲ್ಲಿ ಇರಬಹುದೆಂದು ಶಂಕಿಸಿ ಅಲ್ಲಿಗೆ ತೆರಳಿತ್ತಾದರೂ ಅಲ್ಲಿಯೂ ಆತನ ಸುಳಿವು ಸಿಕ್ಕಿಲ್ಲ. ಹರಿಹರದ ಜೆ.ಸಿ.ಬಡಾವಣೆಯಲ್ಲಿ ತಾಹೀರ್ ಔಷಧ ಅಂಗಡಿ ನಡೆಸುತ್ತಿದ್ದನು ಎಂದು ಪೊಲಿಸ್ ಮೂಲಗಳು ತಿಳಿಸಿವೆ.