ದಾವಣಗೆರೆ: ಒಟ್ಟಿಗೆ ಪ್ರಾರ್ಥನೆ ಸಲ್ಲಿಸುವ, ಭೋಜನ ಸೇವಿಸುವ ಹಾಗೂ ಅಧ್ಯಯನದ ಪರಿಪಾಠವುಳ್ಳ ಕುಟುಂಬದಲ್ಲಿ ಸಂಬಂಧಗಳು ಅನ್ಯೋನ್ಯವಾಗಿರಲು ಸಾಧ್ಯ ಎಂದು ನಗರದ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ ಹೇಳಿದರು.
ವಾಸವಿ ಸೇವಾ ಸಂಘದಿಂದ ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರೇಮಾ ರಾಜನಹಳ್ಳಿ ರಮಾನಂದ ಕಲ್ಯಾಣ ಮಂಟಪ ಉದ್ಘಾಟನೆಯ ಮೂರನೇ ದಿನದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹೆತ್ತವರು ಮಕ್ಕಳಿಗೆ ಆದರ್ಶವಾಗುವಂತೆ ಜೀವನ ಸಾಗಿಸಬೇಕು. ಮಕ್ಕಳೂ ಸಹ ಪಾಲಕರಿಗೆ ಗೌರವ ತರುವಂಥ ಬದುಕು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಅಪರಿಚಿತರಿಂದ ಗೌರವ ಸಂಪಾದಿಸುವುದು ಸುಲಭ. ಆದರೆ, ನಮ್ಮ ಸ್ವಭಾವ ಗೊತ್ತಿರುವವರಿಂದ ಅದನ್ನು ಪಡೆಯುವುದು ಕಷ್ಟ. ವ್ಯಕ್ತಿತ್ವ ಉತ್ತಮವಾಗಿದ್ದಾಗ ಮಾತ್ರ ಕುಟುಂಬದಲ್ಲಿ ಗೌರವ ಸಿಗಲಿದೆ ಎಂದು ಹೇಳಿದರು.
ವ್ಯಕ್ತಿಯ ಒಳಗಿನ ಬಡತನವನ್ನು ಬಾಹ್ಯ ಐಶ್ವರ್ಯದಿಂದ ತುಂಬಲು ಸಾಧ್ಯವಿಲ್ಲ. ಸ್ವಾರ್ಥಕ್ಕೆ ಕಡಿವಾಣ ಹಾಕಿ ದೈವತ್ವ ಬೆಳೆಸಿಕೊಳ್ಳುವುದರಿಂದ ಮಾತ್ರ ಉನ್ನತಿ ಸಾಧ್ಯ ಎಂದು ಹೇಳಿದರು.
ಪಶುತ್ವ, ಮನುಷ್ಯತ್ವ ಹಾಗೂ ದೈವತ್ವ ಎಂಬ ಮೂರು ಹಂತಗಳಿವೆ. ಪಶುಗಳು ಸಹ ಆಹಾರ, ಗೂಡು ಹಾಗೂ ಮರಿಗಳನ್ನು ನಿರ್ವಹಿಸುತ್ತವೆ. ಮನುಷ್ಯ ಜೀವನದ ಉದ್ದೇಶ ಇಷ್ಟಕ್ಕೇ ಇದ್ದರೆ, ಪಶುತ್ವದ ಗುಣಕ್ಕೆ ಸೀಮಿತವಾಗಲಿದೆ.
ಪ್ರಾಣಿ ಗುಣಗಳಿಂದ ಮೇಲೆದ್ದು ಬಂದಾಗ ಮನುಷ್ಯತ್ವ ಹಾಗೂ ದೈವತ್ವಕ್ಕೆ ತಲುಪಲು ಸಾಧ್ಯವಾಗುತ್ತದೆ. ಆತ್ಮೀಯತೆ, ಸಹಜತೆ, ಪ್ರೀತಿ, ನಿಸ್ವಾರ್ಥ ಮುಂತಾದವು ದೈವತ್ವದಲ್ಲಿ ಕಂಡುಬರುತ್ತವೆ ಎಂದವರು ತಿಳಿಸಿದರು.
ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್ ಮಾತನಾಡಿ, ಭಾರತೀಯ ಹಿಂದು ಸಂಸ್ಕೃತಿ ಹಾಗೂ ಗುರು ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸಬೇಕು. ಪಾರಂಪರಿಕ ಹೆಗ್ಗಳಿಕೆಯನ್ನು ತಿಳಿಸುವ ಹೊಣೆ ಹಿರಿಯರ ಮೇಲಿದೆ. ಇದರಿಂದ ಸಮಾಜವನ್ನು ಗಟ್ಟಿಗೊಳಿಸಬಹುದು ಎಂದು ಹೇಳಿದರು.
ವಾಸವಿ ಸೇವಾ ಸಂಘದ ಅಧ್ಯಕ್ಷ ಕೆ.ಎಸ್. ರುದ್ರಶ್ರೇಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಶ್ರೇಷ್ಠಿ, ವೈ. ಅನಂತ ಶ್ರೇಷ್ಠಿ, ಮಾಜಿ ಖಜಾಂಚಿ ಬಿ.ಎಚ್. ಕೃಷ್ಣಮೂರ್ತಿ ಶ್ರೇಷ್ಠಿ, ಗೌರವಾಧ್ಯಕ್ಷ ಎಚ್.ಪ್ರಹ್ಲಾದಶ್ರೇಷ್ಠಿ, ನಿವೃತ್ತ ಕೃಷಿ ಅಧಿಕಾರಿ ಎಸ್. ನಾಗರಾಜ್ ಶ್ರೇಷ್ಠಿ, ಮುಖಂಡರಾದ ಯು.ಟಿ.ಐ. ಮಂಜುನಾಥ, ಎಚ್.ವಿ. ರಮೇಶ್, ಎಸ್.ಆರ್. ಮಂಜುನಾಥ, ಬಿ.ಎಚ್.ಭಾಸ್ಕರ ಶ್ರೇಷ್ಠಿ, ಮೀನಾಕ್ಷಮ್ಮ ಶ್ರೀಧರ ಶ್ರೇಷ್ಠಿ, ಲಕ್ಷ್ಮಿದೇವಮ್ಮ ರಾಘವೇಂದ್ರ ಶ್ರೇಷ್ಠಿ ಇದ್ದರು.
---