ಜಿಲ್ಲೆ

ಶೋಷಿತರಿಗೆ ಒಳಮೀಸಲು ಅನಿವಾರ್ಯ  ಮಾದಾರ ಚನ್ನಯ್ಯ ಶ್ರೀ

ಡಿ. ಎಂ. ಮಹೇಶ್

ದಾವಣಗೆರೆ: ಸಾಮಾಜಿಕ ವ್ಯವಸ್ಥೆಯಲ್ಲಿ ಅಶಕ್ತರು, ನಿರ್ಗತಿಕರು ಹಾಗೂ ಅಸ್ಪೃಶ್ಯತೆಯಿಂದ ನೋವುಂಡವರಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರ  ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದರು.
ಗುರು ರಾಮದಾಸ ಸ್ವಾಮಿ ಆಧ್ಯಾತ್ಮಿಕ ಸೇವಾ ಟ್ರಸ್ಟಿನಿಂದ ನಗರಪಾಲಿಕೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರು ರಾಮದಾಸರ 66ನೇ ಹಾಗೂ ಕೊಂಡಯ್ಯ ಸ್ವಾಮಿಗಳ 18ನೇ ಪುಣ್ಯಾರಾಧನೆ, ಸಾಮೂಹಿಕ ಕಲ್ಯಾಣ ಮಹೋತ್ಸವ, ಜಿಲ್ಲಾ ಮಾದಿಗ-ಛಲವಾದಿ ಸಮಾಜದ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.
30 ವರ್ಷದಿಂದಲೂ ಹೋರಾಟ ಮಾಡುತ್ತಿದ್ದೇವೆ. ನಮ್ಮ ಕೈಲಿ ಉಪವಾಸ ಸತ್ಯಾಗ್ರಹ ಆಗಲ್ಲ. ಸರ್ಕಾರದಲ್ಲಿ ಪರ-ವಿರೋಧ ಚರ್ಚೆಗಳಿವೆ, ಅವೆಲ್ಲವನ್ನು ತೀರ್ಮಾನಿಸಿಕೊಂಡು ತದನಂತರ ಹೋರಾಟದ ಬಗ್ಗೆ ಚಿಂತಿಸೋಣ ಎಂದೂ ಹೇಳಿದರು.
ಸಮಾಜದ ಮುಖ್ಯವಾಹಿನಿಗೆ ಬಂದವರು, ಈ ಬಗ್ಗೆ ಚರ್ಚಿಸಬೇಕು. ಗೊಂದಲ ಮಾಡಬಾರದು. ಜಾತಿ ವ್ಯವಸ್ಥೆಯಿಂದ ಬಳಲಿದ ಸಮುದಾಯಗಳ ಮುನ್ನಡೆ ಕುರಿತು ಎಲ್ಲಾ ಮಠಾಧೀಶರು ಮತ್ತು ಪ್ರಜ್ಞಾವಂತರು ಚಿಂತಿಸಬೇಕಿದೆ ಎಂದರು.
ಒಬ್ಬರ ಹಕ್ಕನ್ನು ಮತ್ತೊಬ್ಬರು ಕಸಿದುಕೊಳ್ಳಬೇಕಿಲ್ಲ. ಯಾವ ಸಮುದಾಯಕ್ಕೆ, ಯಾವ ಸಂದರ್ಭದಲ್ಲಿ ನಿಗದಿಯಾದ ಮೀಸಲು ಪ್ರಮಾಣವನ್ನು ಆಯಾ ಸಮಾಜಕ್ಕೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದರು.  
ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವವರು ಆರ್ಥಿಕ ಶಕ್ತಿವಂತರಲ್ಲ. ಇಂತಹ ನೂರಾರು ಕುಟುಂಬಗಳು ಆರ್ಥಿಕವಾಗಿ ಪ್ರಬಲರಾಗಿ ಸಮಾಜದ ಮುನ್ನೆಲೆಗೆ ಬರಲು ಒಳ ಮೀಸಲಾತಿ ಅವಶ್ಯವಿದೆ ಎಂದು ಹೇಳಿದರು.
ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ ಮಾತನಾಡಿ, ಅಧಿಕಾರಕ್ಕೆ ಬಂದ ಬಳಿಕ ಒಳ ಮೀಸಲಾತಿ ಜಾರಿ ಮಾಡುವುದಾಗಿ ಸಿದ್ದರಾಮಯ್ಯನವರು ಚಿತ್ರದುರ್ಗ ಸಮಾವೇಶದಲ್ಲಿ ನೀಡಿದ್ದ ಭರವಸೆ ಹುಸಿಯಾಗಿದೆ. ಸಮಪಾಲು, ಸಮಬಾಳು ಎಂಬುದು ಅರ್ಥಹೀನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ದಬ್ಬಾಳಿಕೆ ಮಾಡಿರುವುದು ಖಂಡನೀಯ. ಇಂತಹ ಘಟನೆ ದೇಶದಲ್ಲೇ ಮೊದಲು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಳ ಮೀಸಲಾತಿ ಜಾರಿ ಮಾಡದಿದ್ದಲ್ಲಿ ನಿಮ್ಮ ಅಧಿಕಾರ ಬಹಳ ದಿನ ಇರುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ದಾಂಪತ್ಯದಲ್ಲಿ ಸಂಪತ್ತು ಮುಖ್ಯವಲ್ಲ, ದಂಪತಿ ಮನಸ್ಸು ಒಂದಾಗಿರಬೇಕು ಮತ್ತು ಪರಸ್ಪರ ಪ್ರೀತಿ ಇರಬೇಕು. ಯಾವುದೇ ಕಷ್ಟ-ತೊಂದರೆ ಬಂದರೂ ತಾಳ್ಮೆಯಿಂದ ನಿಭಾಯಿಸಿದರೆ ಸುಖಮಯ ಜೀವನ ನಡೆಸಬಹುದು ಎಂದು ಹೇಳಿದರು.
ಸಾಮೂಹಿಕ ವಿವಾಹದಲ್ಲಿ 13 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನ ಗಾಂಧಿನಗರದಿಂದ ಮೆರವಣಿಗೆ ಮೂಲಕ ವಧು-ವರರು ವೇದಿಕೆಗೆ ಆಗಮಿಸಿದರು.
ರಾಜ್ಯ ಪೌರಕಾರ್ಮಿಕ ಸಂಘದ ಕಾರ್ಯಾಧ್ಯಕ್ಷ ಎಲ್.ಎಂ ಹನುಮಂತಪ್ಪ,  ಮೇಯರ್ ಚಮನ್‌ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಮಾಜಿ ಶಾಸಕ ಎಸ್. ರಾಮಪ್ಪ, ಸಮಾಜದ ಮುಖಂಡ ರವಿನಾರಾಯಣ, ಎನ್.ರುದ್ರಮುನಿ, ಎನ್.ಜಿ. ಪುಟ್ಟಸ್ವಾಮಿ, ಹೆಗ್ಗೆರೆ ರಂಗಪ್ಪ, ಶೇಖರಪ್ಪ, ಎಸ್.ಮಲ್ಲಿಕಾರ್ಜುನ, ಮಲ್ಲೇಶಪ್ಪ, ಮಾದಿಗ ಮತ್ತು ಛಲವಾದಿ ಸಮಾಜದ ಮುಖಂಡರು ಇದ್ದರು.