ಜಿಲ್ಲೆ

ಜಗಳೂರಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆತಿಥ್ಯ ಡಿ.28, 29ಕ್ಕೆ ಆಯೋಜನೆಗೆ ಸಭೆ ನಿರ್ಧಾರ

ಡಿ. ಎಂ. ಮಹೇಶ್

ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಡಿ.28 ಮತ್ತು 29ರಂದು ಜಗಳೂರು ಪಟ್ಟಣದಲ್ಲಿ ಆಯೋಜನೆಯಾಗಿರುವುದು ಖುಷಿ ತಂದಿದೆ. ಕುಂದು ಕೊರತೆಗಳಿಲ್ಲದೆ ಕನ್ನಡ ಹಬ್ಬ ಅದ್ದೂರಿಯಾಗಿ ಆಚರಿಸಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಜಗಳೂರು ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಸಾಪ ಜಿಲ್ಲಾ ಸಮ್ಮೇಳನದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯಾಗಿ 28 ವರ್ಷಗಳ ನಂತರ ಜಗಳೂರಿನಲ್ಲಿ 14ನೇ ಜಿಲ್ಲಾ ಸಮ್ಮೇಳನ ನಡೆಯುತ್ತಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಬರುವ ಕನ್ನಡ ಸಾಹಿತಿ, ಕವಿ, ವಾಚಕರು ಸೇರಿ ಕನ್ನಡಾಭಿಮಾನಿಗಳಿಗೆ ಅದ್ದೂರಿ ಸ್ವಾಗತ ಮಾಡಲಾಗುವುದು. ತಾಯಿ ಭುವನೇಶ್ವರಿ ತೇರೆಳೆಯಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.  
ಬರದ ನಾಡು ಬಂಗಾರದ ನಾಡಾಗಲಿ ಎಂದು ಸಿರಿಗೆರೆಯ ಶ್ರೀಗಳು ಆಶೀರ್ವದಿಸಿದ್ದಾರೆ. ಇದರ ಜತೆಗೆ ಜ್ಞಾನ ಭಂಡಾರದ ಬೀಡಾಗಬೇಕು ಎಂಬುದು ನಮ್ಮೆಲ್ಲರ ಇಚ್ಛೆ. ಸಮ್ಮೇಳನದಲ್ಲಿ ಗೊಂದಲ ಇರಬಾರದು. ಇದು ಯಾರ ಮನೆಯ ಕಾರ್ಯಕ್ರಮವಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇದು ಹೃದಯದಿಂದ ಆಗಬೇಕು ಎಂದು ಸಾಹಿತ್ಯಾಸಕ್ತರಿಗೆ ಕಿವಿಮಾತು ಹೇಳಿದರು.  
ತಾಲೂಕಿನ ಪ್ರತಿ ಊರುಗಳಿಗೆ ಕನ್ನಡ ರಥದ ಮಾಹಿತಿ ನೀಡಿ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸಮ್ಮೇಳನದ ಉದ್ಘಾಟನೆಗೆ ಮುಖ್ಯಮಂತ್ರಿ ಕರೆಸುವ ವಿಚಾರಕ್ಕೆ ಸಮಯ ಬೇಕಾಗಲಿದೆ ಎಂದರು.  
ಸಮ್ಮೇಳನಕ್ಕೆ ಇನ್ನು ಎರಡು ತಿಂಗಳು ಕಾಲಾವಕಾಶವಿದೆ. ಹಾಗೆಂದು ಸುಮ್ಮನೆ ಕೂರದೆ ಸಮಿತಿ ರಚಿಸಿಕೊಂಡು ಕಾರ್ಯಾರಂಭ ಮಾಡಬೇಕು. ಖರ್ಚು ವೆಚ್ಚಗಳು ಪಾರದರ್ಶಕವಾಗಿರಲಿ. ಆಹ್ವಾನಿಸಬೇಕಾದ ಅತಿಥಿಗಳ ಕುರಿತು ತೀರ್ಮಾನಿಸಬೇಕು. ಸಮರ್ಥರಿಗೆ ಜವಾಬ್ದಾರಿ ಕೊಡಿ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದರು.
ಸರ್ಕಾರದ ಅನುದಾನ ಹಾಗೂ ಉಳಿದ ಹಣವನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನು ಮುಂದಿನ ಸಭೆಯಲ್ಲಿ  ಚರ್ಚಿಸೋಣ ಎಂದು ಶಾಸಕರು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಪ್ರತಿ ಹಳ್ಳಿಗಳಿಂದಲೂ ಚಿಕ್ಕ ರಥದಂತೆ ಆಟೋಗಳನ್ನು ಶೃಂಗರಿಸಿ ಜನ ಜಾಗೃತಿ ಮೂಡಿಸಬೇಕು. ಹೆಚ್ಚು ಸ್ಥಳೀಯ ಸಾಹಿತಿಗಳು, ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದರು.
ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ, ಸಮ್ಮೇಳನದ ಸಮಿತಿಗಳು ಮತ್ತು ಖರ್ಚು ವೆಚ್ಚ, ಅತಿಥಿಗಳ ಆಹ್ವಾನ, ಸನ್ಮಾನ ಸೇರಿ ಸಮ್ಮೇಳನಕ್ಕೆ ಕನಿಷ್ಠ್ಠ 18-20 ಲಕ್ಷ ರೂ. ಖರ್ಚಾಗಬಹುದು ಎಂದು ಯೋಜನೆ ಬಗ್ಗೆ ಮಾಹಿತಿ ನೀಡಿದರು.  
ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷೆ ಸುಜಾತಾ, ಕಾರ್ಯದರ್ಶಿ ಗೀತಾ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಬಿ. ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಚನ್ನಗಿರಿ ತಾಲೂಕಾಧ್ಯಕ್ಷ ಎಲ್.ಜಿ. ಮಧುಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಜಿಗಳಿ ಪ್ರಕಾಶ್, ಜಗದೀಶ್, ಸದಸ್ಯರಾದ ರುದ್ರಾಕ್ಷಿ ಬಾಯಿ, ಷಡಾಕ್ಷರಪ್ಪ ಬೇತೂರು, ಪಲ್ಲಾಗಟ್ಟೆ ಶೇಖರಪ್ಪ, ಮಲ್ಲಿಕಾರ್ಜುನ್, ಗ್ಯಾಸ್ ಓಬಣ್ಣ ಮತ್ತಿತರರಿದ್ದರು.
ಸ್ಥಳೀಯರೇ ಅಧ್ಯಕ್ಷರಾಗಲಿ
ಪ್ರತಿ ಸಮ್ಮೇಳನಕ್ಕೂ ಬೇರೆಡೆಯಿಂದ ಅಧ್ಯಕ್ಷ ನೇಮಕ ಮಾಡುವುದು ಸರಿಯಲ್ಲ. ಸ್ಥಳೀಯ ಸಾಹಿತಿಗಳೇ ಜಗಳೂರಿನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎಂದು ನೀರಾವರಿ ಹೋರಾಟಗಾರ ಓಬಳೇಶ್, ಪ್ರೊ. ನಾಗಲಿಂಗಪ್ಪ, ದಸಂಸ ಸಂಚಾಲಕ ಮಲೆಮಾಚಿಕೆರೆ ಸತೀಶ್, ಧನ್ಯಕುಮಾರ್ ಸಭೆಯಲ್ಲಿ ಒತ್ತಾಯಿಸಿದರು.
ಸಮ್ಮೇಳನವನ್ನು ಕಲ್ಯಾಣಮಂಟಪ ಅಥವಾ ವಿಶಾಲ ಪ್ರದೇಶದಲ್ಲಿ ನಡೆಸಬೇಕೆ ಎಂಬುದು ಸಭೆಯಲ್ಲಿ ನಿಶ್ಚಯವಾಗಲಿಲ್ಲ. ಈ ಬಾರಿ ಜಗಳೂರು ತಾಲೂಕಿನಲ್ಲಿ ಕೆರೆಗಳು ಭರ್ತಿಯಾಗಿದ್ದರ ಹಿನ್ನೆಲೆಯಲ್ಲಿ ವಿಶೇಷ ಹಬ್ಬದ ರೀತಿಯಲ್ಲಿ ಹಬ್ಬ ನಡೆಸುವ ಇರಾದೆ ಶಾಸಕರಿಗೆ ಇದೆ ಎನ್ನಲಾಗಿದೆ