ದಾವಣಗೆರೆ: ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವತಿಯಿಂದ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಅ.6ರಂದು ವಿಚಾರವಾದಿ, ಸಾಹಿತಿ ದಿ.ಪ್ರೊ.ಬಿ.ವಿ. ವೀರಭದ್ರಪ್ಪ ಅವರ ವೈಚಾರಿಕ ಸಾಹಿತ್ಯ ಕುರಿತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು, ಯುವಜನರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬಿತ್ತುವ ಉದ್ದೇಶವಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್. ಸುಜಾತಾ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಖ್ಯಾತ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥವಾಗಿ 2008ರಲ್ಲಿ ಆರಂಭವಾದ ಈ ಪ್ರತಿಷ್ಠಾನದಡಿ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿ ನೀಡುತ್ತ, ಸಾಹಿತ್ಯ ಕಮ್ಮಟ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಮಂಡ್ಯ, ಬಳ್ಳಾರಿಯಲ್ಲಿ ಸಾಹಿತ್ಯ ಕಾರ್ಯಾಗಾರ ನಡೆಸಲಾಗಿತ್ತು. ಈ ಬಾರಿ ವೀರಭದ್ರಪ್ಪ ಅವರ ಸಾಹಿತ್ಯವನ್ನು ಆಯ್ದುಕೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿಮಾ ಸಭಾ ಅಧ್ಯಕ್ಷ ಬಾ.ಮ.ಬಸವರಾಜಯ್ಯ ಮಾತನಾಡಿ ಕಾರ್ಯಕ್ರಮದ ಭಾಗವಾಗಿ ದಾವಣಗೆರೆಯ ವಿವಿಧ ಕಾಲೇಜುಗಳ ಸುಮಾರು 200-300 ವಿದ್ಯಾರ್ಥಿಗಳನ್ನು ಆಯ್ದುಕೊಂಡು ಅವರಿಗೆ ಬಿ.ವಿ.ವೀರಭದ್ರಪ್ಪ ಅವರ ಸಾಹಿತ್ಯ ಪರಿಚಯ ಮಾಡಿಸಲಾಗಿದೆ. ಸಂವಾದದಲ್ಲಿ ಈ ವಿದ್ಯಾರ್ಥಿಗಳ 15ರಿಂದ 20 ಜನರು ಗುಂಪು ಚರ್ಚೆಯೊಂದಿಗೆ ಸಂವಾದಿಸಲಿದ್ದಾರೆ ಎಂದರು.
ಅ.6 ಬೆಳಗ್ಗೆ ಖ್ಯಾತ ಚಿಂತಕ ಡಾ. ಜಿ. ರಾಮಕೃಷ್ಣ ಸಂವಾದ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಅನಂತಮ್ಮ ವೀರಭದ್ರಪ್ಪ, ಎಚ್.ಆರ್. ಸುಜಾತಾ ಅತಿಥಿಗಳಾಗಿ ಭಾಗವಹಿಸುವರು.
ನಂತರ ಮಹಾರಾಣಿ ಕ್ಲಸ್ಟರ್ ವಿವಿ ಪ್ರಾಧ್ಯಾಪಕಿ ಡಾ.ಎಂ.ಎಸ್. ಆಶಾದೇವಿ, ಹಿರಿಯ ಬರಹಗಾರ ಸತೀಶ್ ಕುಲಕರ್ಣಿ ಅವರು ಧರ್ಮ ಮತ್ತು ವೈಚಾರಿಕತೆ ವಿಚಾರವಾಗಿ ವಿಷಯ ಮಂಡಿಸುವರು. ಮಧ್ಯಾಹ್ನದ ಗೋಷ್ಠಿಯಲ್ಲಿ ಮಹಿಳಾ ಮತ್ತು ದಲಿತ ನೋಟ ವಿಚಾರವಾಗಿ ಹುಕ್ಕೇರಿಯ ಬರಹಗಾರ್ತಿ ಡಾ. ಅನಸೂಯಾ ಕಾಂಬ್ಳೆ, ಕಥೆಗಾರ ಡಾ. ರವಿಕುಮಾರ್ ನೀಹ ವಿಚಾರ ಮಂಡಿಸುವರು.
ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಭಗವಹಿಸುವರು ಎಂದು ತಿಳಿಸಿದರು.
ದೇವರು, ಮೂಢನಂಬಿಕೆ ಮತ್ತು ವಾಸ್ತು ಮೊದಲಾದ ವಿಚಾರವಸ್ತುಗಳ ಮೇಲೆ ವೀರಭದ್ರಪ್ಪ ಅವರ ವೈಚಾರಿಕ ಬರಹಗಳನ್ನು ಬರೆದಿದ್ದಾರೆ. ವೈಚಾರಿಕ ಸಾಹಿತ್ಯ ಯುವಜನರಿಗೆ ಸ್ಫೂರ್ತಿ ನೀಡಬಲ್ಲದು ಎಂದು ವೀರಭದ್ರಪ್ಪ ಅವರ ಸಂಬಂಧಿ ಆರ್. ಚಂದ್ರಮೌಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ವೀರಭದ್ರಪ್ಪ ಅವರ ಪುತ್ರಿ ಬಿ.ವಿ. ಸುಧಾ, ಪತ್ರಕರ್ತ ಬಿ.ಎನ್. ಮಲ್ಲೇಶ್ ಇದ್ದರು.
---