ಜಿಲ್ಲೆ

45 ಗ್ರಾಪಂ ಸಂಪೂರ್ಣ ಸಾಕ್ಷರತಾ ಪಂಚಾಯಿತಿ ಘೋಷಣೆಗೆ ಸಿದ್ಧತೆ

ಡಿ. ಎಂ. ಮಹೇಶ್

ದಾವಣಗೆರೆ: ಪ್ರಸಕ್ತ ವರ್ಷ ಜಿಲ್ಲೆಯ 45 ಗ್ರಾಪಂಗಳನ್ನು ಸಂಪೂರ್ಣ ಸಾಕ್ಷರತಾ ಪಂಚಾಯಿತಿಗಳಾಗಿ ಘೋಷಣೆ ಮಾಡಲಾಗುವುದು ಎಂದು ಜಿಪಂ ಸಿಇಒ ಸುರೇಶ್ ಇಟ್ನಾಳ್ ಹೇಳಿದರು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಬಗ್ಗೆ ದಲಿತ ಸಂಘರ್ಷ ಸಮಿತಿಯಿಂದ ನಗರದ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸರ್ಕಾರ ಹಲವಾರು ಕ್ರಮ ತೆಗೆದುಕೊಂಡ ಪರಿಣಾಮ ಸಾಕ್ಷರತಾ ಪ್ರಮಾಣ ಶೇ.86ಕ್ಕೆ ಏರಿದೆ. ಆದರೆ, ಮಹಿಳೆಯರ ಸಾಕ್ಷರತಾ ಪ್ರಮಾಣದಲ್ಲಿ ಬಹಳಷ್ಟು ಸುಧಾರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ಸಾಕ್ಷರತಾ ಪಂಚಾಯಿತಿ ಘೋಷಣೆ ಮಾಡಲು ಶುರು ಮಾಡಿದ್ದೇವೆ. ಇದು ಯಾವುದೇ ಜಾತಿ ಭೇದವಿಲ್ಲದೆ ಗ್ರಾಮದ ಎಲ್ಲರನ್ನು ಒಳಗೊಳ್ಳಲಿದೆ ಎಂದು ತಿಳಿಸಿದರು.
ಚೀನಾ, ಅಮೆರಿಕಾ ಹಾಗೂ ಯುರೋಪಿಯನ್ ದೇಶಗಳು 21ನೇ ಶತಮಾನದಲ್ಲಿ ಇರಬೇಕಾದಂತಹ ಕೌಶಲಗಳ ಬಗ್ಗೆ ಮಾತನಾಡುತ್ತಿದ್ದರೆ ದೇಶದ ಯುವಜನರು ರೀಲ್ಸ್ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಹೀಗಾದರೆ ವಿಕಸಿತ ಭಾರತ ಆಗಲು ಸಾಧ್ಯವಿಲ್ಲ. ಎಲ್ಲರೂ ವಿಕಸಿತಗೊಂಡಾಗ ದೇಶ ವಿಕಸಿತಗೊಳ್ಳುತದೆ ಎಂದರು.
ಸರ್ಕಾರ ಶಿಕ್ಷಣಕ್ಕಾಗಿ ಬಿಸಿಯೂಟ, ಕ್ಷೀರಭಾಗ್ಯ, ವಸತಿ ಶಾಲೆಗಳ ಸ್ಥಾಪನೆ, ವಿದ್ಯಾರ್ಥಿ ವೇತನ ನೀಡುವುದು ಸೇರಿ ಹಲವಾರು ಕಾರ್ಯಕ್ರಮ ರೂಪಿಸಿದ್ದು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಜೀವನದ ಭಾಗ ಆಗಲಿದ್ದು, ಮೊಬೈಲ್ ಗೀಳಿನಿಂದ ಹೊರಬಂದು ಕೌಶಲ ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದು ಹೇಳಿದರು.
ದಸಂಸ ಅಧ್ಯಕ್ಷ ಡಾ.ಎನ್.ಮೂರ್ತಿ ಮಾತನಾಡಿ, ದೇಶದಲ್ಲಿ 12 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, 7 ಕೋಟಿ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಕ್ರಮವಹಿಸಬೇಕು. ಶಿಕ್ಷಣದ ತಾರತಮ್ಯ ಸರಿಪಡಿಸಲು ಖಾಸಗಿ ಶಾಲೆಗಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮಕ್ಕಳ ಉದ್ಧಾರಕ್ಕಾಗಿ 25 ಸಾವಿರ ಕೋಟಿ ನೀಡಿದ್ದೇವೆ ಎನ್ನುತ್ತಿದೆ. ಆದರೆ ಬಹುತೇಕ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದೆ. ಅಲ್ಲದೇ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲೂ ಶಿಕ್ಷೆಯ ಪ್ರಮಾಣ ಬಹಳಷ್ಟು ಕಡಿಮೆಯಿದೆ ಎಂದು ದೂರಿದರು.
ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ್ ಮಾತನಾಡಿ, ದೇಶದ ಸಂವಿಧಾನದಡಿ ಮಹಿಳೆಯರು, ಮಕ್ಕಳು, ಶೋಷಿತ ವರ್ಗದವರನ್ನು ಮುನ್ನಲೆಗೆ ತರಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಹೆಣ್ಣುಮಕ್ಕಳು ಯಾವುದೇ ಆಮಿಷಗಳಿಗೆ ಮಾರುಹೋಗಿ ಶೋಷಣೆಗೆ ಒಳಗಾಗಬಾರದು. ಮಕ್ಕಳ ರಕ್ಷಣಾ ಕಾಯ್ದೆಯಡಿ ಬಹಳ ಕಠಿಣ ಶಿಕ್ಷೆಯಿದೆ ಎಂದು ತಿಳಿಸಿದರು.
ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರಿೂ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರು ಕಾರಣ ಎಂದು ಸ್ಮರಿಸಿದರು.
ದಸಂಸ ಜಿಲ್ಲಾಧ್ಯಕ್ಷ ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಷಣ್ಮುಖಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಟಿ.ಎನ್.ಕವಿತಾ, ರಾಜನಹಳ್ಳಿ ಸೀತಮ್ಮ ಕಾಲೇಜು ಪ್ರಾಚಾರ್ಯ ಟಿ.ಎ.ಕುಸಗಟ್ಟಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಲಿ ರೆಹಮತ್ ಪೈಲ್ವಾನ್ ಇತರರು ಇದ್ದರು.