ಜಿಲ್ಲೆ

ಕುಷ್ಠರೋಗ ಪತ್ತೆ ಅಭಿಯಾನದಡಿ ಕೊಳೆಗೇರಿ, ವೃದ್ಧಾಶ್ರಮ ಕೇಂದ್ರೀಕರಿಸಿ

ಡಿ. ಎಂ. ಮಹೇಶ್

ದಾವಣಗೆರೆ: ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನದಡಿ ವೃದ್ಧಾಶ್ರಮ, ಕೊಳೆಗೇರಿ, ಹಿಂದುಳಿದ ವರ್ಗದವರು ಹಾಗೂ ಜನಸಾಂದ್ರತೆ ಇರುವ ಸ್ಥಳಗಳನ್ನು ಕೇಂದ್ರೀಕರಿಸಿ ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯ ತಮ್ಮ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾವಂತರಲ್ಲಿ ಕುಷ್ಠರೋಗದ ಮಾಹಿತಿ ಇರಲಿದೆ. ಹೀಗಾಗಿ ಇತರೆ ವರ್ಗದವರಿಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾದ್ಯಂತ ನ.3ರಿಂದ 19ರವರೆಗೆ ಹಮ್ಮಿಕೊಂಡಿರುವ ಅಭಿಯಾನವನ್ನು ಜನದಟ್ಟಣೆ ಇರುವ ಕಡೆಗಳಲ್ಲಿ ಆಯೋಜಿಸಿ ಪರಿಣಾಮಕಾರಿಯಾಗಿ ನಡೆಸಬೇಕು. ಶೇ.10ರಷ್ಟು ರೋಗಿಗಳನ್ನು ಪತ್ತೆ ಹಚ್ಚುವಂತಾಗಬೇಕು. ಇದು ರಾಯಚೂರು ಇನ್ನಿತರೆ ಹಿಂದುಳಿದ ಜಿಲ್ಲೆಗಳಿಗೂ ಮಾದರಿಯಾಗಬೇಕು ಎಂದು ಹೇಳಿದರು.

ಹೆಚ್ಚು ಕೂಲಿಕಾರ್ಮಿಕರು ಕಾರ್ಯನಿರತ ನರೇಗಾ ಸ್ಥಳಗಳನ್ನು ತಾಲೂಕಿಗೆ ಒಂದರಂತೆ ಗುರುತಿಸಿ, ಅಲ್ಲಿ ಕುಷ್ಠರೋಗ, ಕ್ಷಯ ಜಾಗೃತಿ ಕಾರ್ಯಕ್ರಮದ ಜತೆಯಲ್ಲೇ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಬೇಕು. ಅದರಿಂದ ಕೂಲಿಕಾರ್ಮಿಕರಿಗೂ ನೆರವಾಗಲಿದೆ ಎಂದು ತಿಳಿಸಿದರು.

ಯಾವ ವಯೋಮಾನದವರಲ್ಲಿ ಕುಷ್ಠರೋಗ ಹೆಚ್ಚಿದೆ ಎಂಬುದನ್ನು ಅಭಿಯಾನದಡಿ ಕಂಡುಕೊಂಡರೆ ಆ ವರ್ಗವನ್ನು ಮುಂದಿನ ದಿನದಲ್ಲಿ ಗುರಿಯಾಗಿಸಿ ಕೆಲಸ ಮಾಡಬಹುದು. ಅಭಿಯಾನದಡಿ ಸರ್ಕಾರ ನೀಡಿರುವ 10 ಲಕ್ಷ ರೂ. ಬಜೆಟ್ ಸದ್ಬಳಕೆಯಾಗಲು ಅಧಿಕಾರಿಗಳು ಶ್ರಮಿಸಬೇಕು ಎಂದೂ ಮನವಿ ಮಾಡಿದರು.

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಮಂಜುನಾಥ ಪಾಟೀಲ್ ಮಾತನಾಡಿ ಹಿಂದಿನ ಕೆಲ ವರ್ಷಗಳಲ್ಲಿ ಹೆಚ್ಚು ಕುಷ್ಠರೋಗ ಕಂಡುಬಂದ ಗ್ರಾಮಾಂತರ ಪ್ರದೇಶ ಹಾಗೂ ನಗರಗಳು ಒಳಗೊಂಡಂತೆ 1,06,143 ಮನೆಗಳಿಗೆ ಅಭಿಯಾನದಡಿ ನಿಯೋಜಿತ ಸಿಬ್ಬಂದಿ ತೆರಳಿ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.

ಒಟ್ಟು 73 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ ಹಾಗೂ 221 ಗ್ರಾಮ/ ನಗರ ಪ್ರದೇಶಗಳಲ್ಲಿ ಅಭಿಯಾನ ನಡೆಯಲಿದೆ. ತಲಾ 410 ಆಶಾ ಕಾರ್ಯಕರ್ತರು, ಪುರುಷ ಸಹಾಯಕರು ಈ ಅಭಿಯಾನ ನಡೆಸಿಕೊಡಲಿದ್ದು, ಆರೋಗ್ಯ ಇಲಾಖೆಯ 47 ಸಿಬ್ಬಂದಿ ಇದರ ಮೇಲುಸ್ತುವಾರಿ ವಹಿಸುವರು ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಸದ್ಯಕ್ಕೆ 56 ಮಂದಿ ಕುಷ್ಠರೋಗದ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್‌ಸಿಡಿಸಿ ಅಭಿಯಾನದಡಿ ಕಳೆದ ವರ್ಷ 11 ಮಂದಿ ಶಂಕಿತ ಕುಷ್ಠರೋಗಿಗಳನ್ನು ಗುರುತಿಸಲಾಗಿತ್ತು ಎಂದು ಹೇಳಿದರು.

ಡಿಎಚ್‌ಒ ಡಾ. ಎಸ್. ಷಣ್ಮುಖಪ್ಪ ಮಾತನಾಡಿ ಮನೆ ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರಿಗೆ ಒಂದು ದಿನಕ್ಕೆ 75 ರೂ. ಸಂಭಾವನೆ ಇದೆ. ಕುಷ್ಟ ರೋಗ ಪತ್ತೆ ಹಚ್ಚಿದ್ದಲ್ಲಿ ಹಾಗೂ ಅದ್ಕಕೆ ಚಿಕಿತ್ಸೆ ನೀಡಿದಲ್ಲಿ ಪ್ರತ್ಯೇಕ ಗೌರವಧನ ನೀಡಲಾಗುತ್ತದೆ. ಹಿಂದಿನ ವರ್ಷಗಳಲ್ಲಿ 20ರಿಂದ 60ರ ವಯೋಮಾನದವರಲ್ಲಿ ಕುಷ್ಠರೋಗ ಪತ್ತೆಯಾಗಿತ್ತು ಎಂದು ವಿವರಿಸಿದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕೆ.ಎಚ್. ಗಂಗಾಧರ್ ಮಾತನಾಡಿ ಕುಷ್ಠರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ರಂಬ ರೋಗಾಣುವಿನಿಂದ ಬರಲಿದ್ದು, ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳಿದ್ದಲ್ಲಿ ಜನರು ವೈದ್ಯರಲ್ಲಿ ತೋರಿಸಬೇಕು. 6 ತಿಂಗಳಿಂದ 1 ವರ್ಷಾವಧಿವರೆಗೆ ಚಿಕಿತ್ಸೆ ಪಡೆದು ಗುಣಪಡಿಸಬಹುದು ಎಂದರು.

ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ನ.6ರಂದು ಪಿಡಿಒಗಳೂ ಸೇರಿ ಸಿಬ್ಬಂದಿಯಿಮದ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುವುದು. ಗರಿಷ್ಠ 250 ಯೂನಿಟ್ ರಕ್ತ ಸಂಗ್ರಹಣೆ ಗುರಿ ತಲುಪಲಾಗುವುದು ಎಂದು ಸಿಇಒ ಇದೇ ವೇಳೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಪಿ.ಡಿ.ಮುರಳೀಧರ, ತಾಲೂಕು ವೈದ್ಯಾಧಿಕಾರಿ ಡಾ. ದೇವರಾಜ ಪಟಗೆ, ಶಿಕ್ಷಣ ಇಲಾಖೆ ಡಿವೈಪಿಸಿ ಎಸ್.ಆರ್. ಪೂರ್ಣಿಮಾ, ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮನೋಜ್, ಸಂದೀಪ, ತಾಲೂಕು ವೈದ್ಯಾಧಿಕಾರಿಗಳು ಇದ್ದರು.

--