ದಾವಣಗೆರೆ: ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಲು ಜಾರಿಗೊಳಿಸಿದ್ದ ಆನ್‌ಲೈನ್ ಶಿಕ್ಷಣದ ಪರಿಣಾಮವಾಗಿ ಮಕ್ಕಳು, ಯುವಜನರು ಮೊಬೈಲ್ ದಾಸರಾಗುತ್ತಿದ್ದಾರೆ ಎಂದು ಬಾಪೂಜಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಕೆ.ಬಿ.ಮಾನಸಾ ವಿಷಾದಿಸಿದರು.
ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಬಾಲಭವನ ಸಮಿತಿ ಸಹಯೋಗದಲ್ಲಿ ನಗರದ ಕೆ.ಎಸ್.ಎಸ್.ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಂ.ಎನ್.ಮುಸ್ಟೂರಪ್ಪ, ದೊಗ್ಗಳ್ಳಿಗೌಡ್ರು ಪುಟ್ಟರಾಜು ಸ್ಮರಣಾರ್ಥ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮೊಬೈಲ್ ದಾಸರಾಗಿರುವ ಮಕ್ಕಳು ನಿತ್ಯ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣ ಹೆಚ್ಚಿದೆ. ಇದರಿಂದ ಹೊರಬರಲು ಮಕ್ಕಳನ್ನು ನೈಜಸ್ಥಿತಿಗೆ ತರುವ ಹೊಣೆಗಾರಿಕೆ ಪಾಲಕರು, ಶಿಕ್ಷಕರು ಮತ್ತು ಸಮಾಜದ ಮೇಲಿದೆ ಎಂದು ಹೇಳಿದರು.
ನಲವತ್ತು ನಿಮಿಷದ ಒಂದು ಪಿರಿಯಡ್ ಅವಧಿಯಲ್ಲಿ ಮಕ್ಕಳ ಆಲಿಸುವಿಕೆ 10 ನಿಮಿಷಕ್ಕೆ ಸೀಮಿತವಾಗಿದೆ. ಅವರ ಆಸಕ್ತಿ ಬೇರೆಡೆಗೆ ವರ್ಗವಾಗಿದೆ. ಇದರಿಂದ ಅನೇಕ ಸೈಬರ್ ಅಪರಾಧಗಳು ಸಂಭವಿಸುತ್ತಿವೆ. ಸಣ್ಣ ಸೋಲು, ಹಿನ್ನಡೆಯಾದರೂ ಯುವಜನರು ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ಜಗತ್ತನ್ನೇ ತಲ್ಲಣಗೊಳಿಸಿದ, ಕರೊನಾ ನಂತರದ ಜನಜೀವನದಲ್ಲಿ ಸಾಕಷ್ಟು ಏರುಪೇರುಗಳಾಗಿದ್ದು, ಅದರಲ್ಲೂ ಜನಾರೋಗ್ಯದಲ್ಲಿ ತೀವ್ರ ತೆರನಾದ ಘಟನೆಗಳು ಸಂಭವಿಸಿವೆ. ವಿಶೇಷವಾಗಿ ಯುವಜನರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಸಂದರ್ಭದಲ್ಲಿ ಯುವ ಜನಾಂಗವನ್ನು ಮಾನಸಿಕ ಹಾಗೂ ದೈಹಿಕ ಸದೃಢರನ್ನಾಗಿಸಬೇಕಿದೆ ಎಂದರು.
ಮಕ್ಕಳ ಮಾನಸಿಕ, ದೈಹಿಕ ಸಬಲತೆಗಾಗಿ ಶಿಕ್ಷಕರು ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದ ತಜ್ಞರು ಸಮಾಲೋಚಿಸಿ ಹೊಸ ನೀತಿ ನಿರೂಪಣೆಗಳನ್ನು ಸಿದ್ಧ್ದಪಡಿಸಬೇಕಿದೆ. ಇಂದಿನ ಅಂಕಾಧಾರಿತ ಶಿಕ್ಷಣದಿಂದ ಹೊರಬಂದು ಜೀವನದಲ್ಲಿ ಬದುಕುವ ಕಲೆ, ಆತ್ಮಸ್ಥೈರ್ಯ, ಮಾನಸಿಕ ಸದೃಢತೆ, ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಒತ್ತು ನೀಡಿದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
ವಿಜ್ಞಾನ ಪರಿಷತ್‌ನ ಜಿಲ್ಲಾ ಗೌರವಾಧ್ಯಕ್ಷ ಡಾ. ಜೆ.ಬಿ.ರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಎಂ.ಕೃಷ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಎಸ್.ಗಂಗಾಧರ್, ಎಂ.ನಾಗರಾಜ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ, ಕೆ.ಎಸ್.ಎಸ್.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್.ಚನ್ನಬಸಪ್ಪ ಇದ್ದರು. ಉಪನ್ಯಾಸಕಿ ಕಲ್ಯಾಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
---