ಜಿಲ್ಲೆ

ಬೆಳಗಾವಿಯಲ್ಲಿ 22ಕ್ಕೆ ವಕೀಲರ ಸಮಾವೇಶ

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಕಲ್ಪಿಸಲು ಆಗ್ರಹಿಸಿ ಸೆ. 22ರಂದು ಬೆಳಗಾವಿಯಲ್ಲಿ ‘ವಕೀಲರ ನಡಿಗೆ ಬೆಳಗಾವಿ ಕಡೆಗೆ’ ಶೀರ್ಷಿಕೆಯಡಿ ಸಮುದಾಯದ ವಕೀಲರ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸಮರ್ಪಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಕಾನೂನಿನ ಮೂಲಕ ಒತ್ತಡ ಹಾಕುವ ಭಾಗವಾಗಿ ಈ ಸಮಾವೇಶ ನಡೆಸಲಾಗುತ್ತಿದೆ. ಯಾವುದೇ ಸರ್ಕಾರ ಬರಲಿ, ಸಿಎಂ ಬದಲಾಗಲಿ ಬಿಡಲಿ, 2ಎ ಮೀಸಲು ಬೇಡಿಕೆ ಈಡೇರುವವರೆಗೂ ಸಮಾಜದ ಹೋರಾಟ ನಿಲ್ಲದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 10ಕ್ಕೆ ಬೆಳಗಾವಿಯ ಗಾಂಧಿಭವನದಲ್ಲಿ ನಡೆಯುವ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ವಕೀಲರು ಭಾಗವಹಿಸುವರು. ಅಂದಿನ ಸಮಾವೇಶ ಸಂದರ್ಭದಲ್ಲಿ ಮುಖ್ಯಮಂತ್ರಿ, ಕಾನೂನು ಸಚಿವರ ಮೂಲಕ ವಕೀಲರನ್ನು ಚರ್ಚೆಗೆ ಕರೆದು, ಲಿಖಿತ ಭರವಸೆ ನೀಡುವವರೆಗೂ ಹೋರಾಟ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾನೂನಾತ್ಮಕವಾಗಿ ಮೀಸಲಾತಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಪಂಚಮಸಾಲಿ ಸಮಾಜದ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಮುಂದಿನ ಹೋರಾಟದ ರೂಪುರೇಷೆ ನಿರ್ಣಯಿಸಲಾಗುವುದು. ಸಮಾವೇಶಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ಆಹ್ವಾನಿಸಲಾಗುವುದು ಎಂದರು.
ರಾಜ್ಯದ ಎಲ್ಲ ಕಡೆ ಪಂಚಮಸಾಲಿ ವಕೀಲರ ನೂತನ ಘಟಕಗಳನ್ನು ಮಾಡುತ್ತಿದ್ದು ಹಿರಿಯ ವಕೀಲರನ್ನು ಸೇರಿಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಸೆ.17ರಂದು ಕಲಬುರಗಿಯಲ್ಲಿ ನಡೆಯಲಿರುವ ಹೈದರಾಬಾದ್ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದು ಈ ವಿಚಾರವಾಗಿ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಯೋಗೇಶ್, ರವಿಶಂಕರ್, ಎಚ್.ಗುರುಮೂರ್ತಿ, ರಮೇಶ್, ಮುರುಗೇಶ್, ಬಸವರಾಜಪ್ಪ, ಶಿವಕುಮಾರ್ ಇದ್ದರು.