ಜಿಲ್ಲೆ

ಅಂಬೇಡ್ಕರ್ ಭವನಕ್ಕೆ ಜಾಗದ ತೀರ್ಮಾನ ಸಮಾಜದ ಹೆಗಲಿಗೆ  ಸಚಿವ ಎಚ್.ಸಿ. ಮಹದೇವಪ್ಪ ಸ್ಪಷ್ಟನೆ

ಡಿ. ಎಂ. ಮಹೇಶ್

ದಾವಣಗೆರೆ: ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಮಾಜದ ಮುಖಂಡರೇ ಸೂಕ್ತ ಜಾಗ ತೀರ್ಮಾನಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಜಿಲ್ಲಾ ಛಲವಾದಿ ಮಹಾಸಭಾ ಎಸ್ಸೆಸ್ಸೆಲ್ಸಿ ಹಾಗೂ ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಉಪ ನಿರ್ದೇಶಕರ ಜಂಟಿ ಖಾತೆಯಲ್ಲಿ 1.50 ಕೋಟಿ ರೂ. ಅನುದಾನವಿದೆ. 1.87 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.
ಜಾಗ ನಿರ್ಧಾರ ಆಗದ್ದರಿಂದ ಭವನ ನನೆಗುದಿಗೆ  ಬಿದ್ದಿದೆ. ನಗರದ ಸರ್ಕ್ಯೂಟ್ ಹೌಸ್ ಅಥವಾ ಹಳೇ ಪಿಬಿ ರಸ್ತೆಯ ಲೋಕೋಪಯೋಗಿ ಇಲಾಖೆ ಜಾಗ ಸೇರಿ ಎಲ್ಲಿ ನಿರ್ಮಿಸಬೇಕು ಎಂಬುದನ್ನು  ಮುಖಂಡರು ನಿರ್ಧರಿಸಬೇಕು ಎಂದು ಸೂಚಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಅಂಬೇಡ್ಕರ್ ಭವನವನ್ನು ಒಬ್ಬೊಬ್ಬರು ಒಂದು ಕಡೆ ನಿರ್ಮಿಸಬೇಕು ಎಂದು ಹೇಳುತ್ತಿರುವುದರಿಂದ ನನೆಗುದಿಗೆ ಬಿದ್ದಿದೆ. ಜಾಗದ ಕುರಿತು ಸೂಕ್ತ ನಿರ್ಧಾರ ಕೈಗೊಂಡರೆ ನಾಳೆಯೇ ಸಮಾಜ ಕಲ್ಯಾಣ ಸಚಿವರಿಂದ ಭೂಮಿಪೂಜೆ ನಡೆಸೋಣ ಎಂದು ಹೇಳಿದರು.
ಎರಡು ಮೂರು ತಿಂಗಳ ಹಿಂದೆಯೇ ಸರ್ವೇ ಮಾಡಿಸಲಾಗಿದೆ. ಸರ್ಕ್ಯೂಟ್ ಹೌಸ್ ಬಳಿಯ ಜಾಗ ಅಂತಿಮ ಹಂತದಲ್ಲಿದೆ. ಆದರೆ, ಜಾಗವನ್ನು ಸಮುದಾಯದ ಮುಖಂಡರು ಗುರುತಿಸಿ ನಿರ್ಧರಿಸಲಿ. ನನ್ನ ಮೇಲೆ ಗೂಬೆ ಕೂರಿಸಬೇಡಿ ಎಂದು ತಿಳಿಸಿದರು.
ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದಾಗ  ಅರೆಬರೆ ಅನುದಾನ ನೀಡಿದ್ದರಿಂದ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅನುದಾನ ಪಡೆದು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಅಂಬೇಡ್ಕರ್ ಭವನವನ್ನು ನಗರದ ಹೃದಯ ಭಾಗದಲ್ಲೇ ನಿರ್ಮಾಣ ಮಾಡಬೇಕು ಎಂದು ಹೇಳಿದರು.
-----