ಜಿಲ್ಲೆ

ಜಗಳೂರು ಬರ ದೂರ   ತುಪ್ಪದಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಸಿರಿಗೆರೆ ಶ್ರೀ

ಡಿ. ಎಂ. ಮಹೇಶ್

ದಾವಣಗೆರೆ: ಜಗಳೂರು ತಾಲೂಕಿನ ಕೆರೆಗಳಿಗೆ ನೀರು ಭರ್ತಿಯಾಗುತ್ತಿದ್ದು, ಬರಗಾಲ ಬವಣೆಯಿಂದ ಸಂಪೂರ್ಣ ಹೊರ ಬರಲಿದೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ  ಹೇಳಿದರು.
ತಾಲೂಕಿನ ತುಪ್ಪದಹಳ್ಳಿ ಕೆರೆಗೆ ಕೋಡಿ ಬಿದ್ದ ಹಿನ್ನಲೆಯಲ್ಲಿ  ಕೆರೆಗೆ ಬಾಗಿನ ಸಮರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ, ಮಾತನಾಡಿದರು.
ಏತ ನೀರಾವರಿ ಯೋಜನೆ ಮೂಲಕ 22 ಕೆರೆಗೆ ನೀರು ತುಂಬಿಸುವ ಯೋಜನೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ತಡವಾಗಿತ್ತು. ಇದೀಗ ಹೊಸ ಪೈಪಲೈನ್ ಮಾಡಿಸಲು  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕೊಡಲು ಸೂಚಿಸಲಾಗಿದ್ದು, ಹಾಳಾದ ಹಲವು ಪೈಪ್ ತೆರವುಗೊಳಿಸಿ ಅಲ್ಲಿ ತುರ್ತಾಗಿ ಹೊಸಪೈಪ್ ಹಾಕಿ ನೀರು ಹರಿಸಲು ತಿಳಿಸಲಾಗಿದೆ ಎಂದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಜಗಳೂರು ಮತ್ತು ಭರಮಸಾಗರ ಕೆರೆಗಳು ಸಂಪೂರ್ಣ ತುಂಬಿ ಹರಿಯುತ್ತಿರುವುದು ಸಂತಸ ತಂದಿದೆ. ಎಲ್ಲಿ ನೋಡಿದರೂ ಕೆರೆಗಳು ನದಿಗಳಂತೆ ಕಂಗೊಳಿಸುತ್ತಿವೆ. ಇನ್ನು ಮುಂದೆ ಸದಾ ಕಾಲವೂ ಕೆರೆಗಳು ತುಂಬಿರಲಿ ಎಂದು ಆಶಿಸಿದರು.
ಕೆರೆಗಳಿಗೆ ನೀರು ಬಂದಿವೆ. ಆದರೆ, ಕೆರೆಗಳ ಸಂರಕ್ಷಣೆ ಮಾಡುವ ಹೊಣೆಗಾರಿಕೆ ಆಯಾ ಗ್ರಾಮಗಳ ಜನರ ಕರ್ತವ್ಯ. ಅಕ್ಕಪಕ್ಕದ ಗ್ರಾಮದ ರೈತರು ಒಂದಾಣಿಕೆಯಿಂದ ಸಹೋದರರಂತೆ ಬದುಕಬೇಕು ಎಂದರು.
ಜಗಳೂರು ಕ್ಷೇತ್ರದ 57 ಕೆರೆಗಳು, ಭರಮಸಾಗರದ ವ್ಯಾಪ್ತಿಯ ಕೆರೆಗಳು ನದಿಯ ರೀತಿಯಲ್ಲಿ ತುಂಬಿ ಹರಿಯುತ್ತಿವೆ. ಇದಕ್ಕೆ ತುಪ್ಪದಹಳ್ಳಿಯ ಕೆರೆಯು ಹಳ್ಳದ ರೀತಿ ಹರಿಯದೇ ನದಿಯ ನೀರಾಗಿ ಹರಿಯುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ ಎಂದರು.  
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಏಳು ದಶಕಗಳಿಂದಲೂ ಸತತ ಬರಗಾಲವನ್ನೆ ಕಂಡ ಜಗಳೂರು ಇದೀಗ ಅರೆ ಮಲೆನಾಡಾಗಿ ಕಂಗೊಳಿಸುತ್ತಿದೆ. ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ. ಇದಕ್ಕೆ ರೂವಾರಿಗಳು ಸಿರಿಗೆರೆ ಡಾ. ಶಿವಮೂರ್ತಿ ಶ್ರೀಗಳು ಎಂದರು.
ಈ ಯೋಜನೆಯ ಯಶಸ್ಸಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಸಿಎಂಗಳು ಹಾಗೂ ನೀರಾವರಿ ಸಚಿವರ ಪಾತ್ರ ಬಹುಮುಖ್ಯವಾಗಿದೆ. ಈಗ 57 ಕೆರೆಗಳು, ನಂತರ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಕೈ ಹಿಡಿಯಲಿವೆ ಎಂದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, 57 ಕೆರೆಗೆ ನೀರು ತುಂಬಿಸುವ ಯೋಜನೆಯೂ ಏತ ನೀರಾವರಿ ಯೋಜನೆಯಂತೆ ಅರ್ಧಕ್ಕೆ ನಿಲ್ಲುತ್ತದೆ ಅಂದುಕೊಂಡಿದ್ದೆ. ಆದರೆ, ಶ್ರೀಗಳ ಕಾಳಜಿಯಿಂದ ಯೋಜನೆ ಪೂರ್ಣಗೊಂಡಿರುವುದು ಖುಷಿಯಾಗಿದೆ ಎಂದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸಿರಿಗೆರೆ ಶ್ರೀಗಳು ಆಧುನಿಕ ಭಗೀರಥರು. ಜಗಳೂರು ಕ್ಷೇತ್ರದ ಕೆರೆಗಳಿಗೆ ನೀರು ಬರುವಂತೆ ಮಾಡಿ ನೀರಾವರಿ ಪ್ರದೇಶ ಮಾಡಿಕೊಟ್ಟಿದ್ದಾರೆ. ಹತ್ತಿ, ಮೆಕ್ಕೆಜೋಳ, ರಾಗಿ ಬೆಳೆಯುತ್ತಿರುವ ಕ್ಷೇತ್ರದ ರೈತರು ಮುಂದಿನ ದಿನಗಳಲ್ಲಿ ಅಡಕೆ ಸೇರಿದಂತೆ ವಾಣಿಜ್ಯ ಬೆಳೆ ಬೆಳೆಯುವ ಮೂಲಕ ಇನ್ನು ಮುಂದೆ ಬರದನಾಡು ಅಲ್ಲ, ಬಂಗಾರದನಾಡು. ಬಂಗಾರ ಬಿತ್ತಿ ಬೆಳೆ ಬೆಳೆಯುವ ಮೂಲಕ ದೊಡ್ಡ ಮಲೆನಾಡು ಆಗಲಿದೆ ಎಂದರು.
ನೀರಾವರಿ ಇಲಾಖೆಯ ನಿವೃತ್ತ ಎಂ.ಡಿ. ಮಲ್ಲಿಕಾರ್ಜುನ್ ಮಾತನಾಡಿದರು. ಸಿರಿಗೆರೆ ಶ್ರೀಗಳನ್ನು ನೂರಾರು ಮಹಿಳೆಯರು ಕುಂಬ ಮೇಳದೊಂದಿಗೆ ಅದ್ದೂರಿಯಾಗಿ ವಿವಿಧ ಡೊಳ್ಳು , ಭಜನೆಗಳೊಂದಿಗೆ ಗ್ರಾಮಸ್ಥರು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ತುಪ್ಪದಹಳ್ಳಿ ವಕೀಲ ಬಸವರಾಜಪ್ಪ, ಶಿವಕುಮಾರ್, ಶಶಿ ಹೆಮ್ಮನಬೇತೂರು, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ನೀರಾವರಿ ಇಲಾಖೆಯ ಅಧಿಕಾರಿಗಳಿದ್ದರು.