ದಾವಣಗೆರೆ: ರೈತರಿಗೆ ಕಲಬೆರಕೆ ಭತ್ತದ ಬೀಜಗಳನ್ನು ಮಾರಾಟ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ಕೋಲ್ಕುಂಟೆ ಗ್ರಾಮದ ಗದ್ದೆಗಳಿಗೆ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ದಾವಣಗೆರೆಯ ಅಂಗಡಿಯೊಂದರಲ್ಲಿ ಬಿಪಿಟಿ ಸೋನ ಬಿತ್ತನೆ ಬೀಜಗಳನ್ನು ಖರೀದಿಸಿ ನಾಟಿ ಮಾಡಿದ್ದೆವು. ಒಡೆ ಬಿಚ್ಚುವ ಹಂತದಲ್ಲಿ ಕಲಬೆರಕೆ ಬೀಜ ಎಂದು ಗೊತ್ತಾಯಿತು ಎಂದು ರೈತರು ಜಂಟಿ ಕೃಷಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮಾಯಕೊಂಡ ಹೋಬಳಿಯ ಕೃಷಿ ಅಧಿಕಾರಿಗಳಿಬ್ಬರನ್ನು ಬೆಳೆ ವೀಕ್ಷಣೆಗೆ ಕಳಿಸಿದ್ದರು. ಆಗ ಸ್ಥಳಕ್ಕೆ ಜಂಟಿ ಕೃಷಿ ನಿರ್ದೇಶಕರೇ ಬರಬೇಕು ಎಂದು ಪಟ್ಟು ಹಿಡಿದ ರೈತರು, ದೇವಸ್ಥಾನದ ಮುಂಭಾಗದಲ್ಲಿ ಇಬ್ಬರು ಅಧಿಕಾರಿಗಳನ್ನು ಕೂಡಿಹಾಕಿದರು.
ಆಗ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಗ್ರಾಮಕ್ಕೆ ಭೇಟಿ ನೀಡಿ, ಕಲಬೆರಕೆ ಭತ್ತವನ್ನು ವೀಕ್ಷಣೆ ಮಾಡಿದರು. ಕೃಷಿ ವಿಜ್ಞಾನಿಗಳನ್ನು ಕರೆಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ರೈತ ಮುಖಂಡರಾದ ಬಸಣ್ಣ, ಕೆ.ಎಚ್. ನಾಗೇಂದ್ರಪ್ಪ, ಪೂಜಾರ ಹನುಮಂತಪ್ಪ, ಎಸ್. ಪ್ರಕಾಶ್, ಕೆ. ಹನುಮಂತಪ್ಪ, ಭೀಮಪ್ಪ, ಮಂಜಪ್ಪ, ರುದ್ರೇಶ್ ಇದ್ದರು.