ಜಿಲ್ಲೆ

ರೈಲಿನಲ್ಲಿ ಚಾಕು ಇರಿದವ ಆಸ್ಪತ್ರೆಯಲ್ಲೂ ಎದುರಾದ!

ಡಿ. ಎಂ. ಮಹೇಶ್

ದಾವಣಗೆರೆ: ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ, ಚಿತ್ರದುರ್ಗ ಜಿಲ್ಲೆ ಸಾಸಲು ಬಳಿ ಚಲಿಸುವ ರೈಲಿನಲ್ಲಿ ಗೃಹಿಣಿಯೊಬ್ಬರಿಗೆ ಚಾಕು ಇರಿದಿದ್ದು ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.
ಚಾಕು ಇರಿತದಿಂದ ಗಾಯಗೊಂಡಿದ್ದ ಗದಗ ಜಿಲ್ಲೆಯ ಕಲ್ಲುಮುಳಗುಂದ ನಿವಾಸಿ ಲಕ್ಷ್ಮಿ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಎಡಗೈ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.
‘ನಾನು ರೈಲಿನ ಶೌಚಗೃಹದಲ್ಲಿದ್ದೆ. ಹೊರಗಿನಿಂದ ಯಾರೋ ಕದ ಬಡಿದರು. ಬಾಗಿಲ ಕೆಳಗೆ ವ್ಯಕ್ತಿಯೊಬ್ಬರ ಕಾಲು ಕಾಣಿಸಿತು. ‘ಯಾವನೋ ಅವನು’ ಎಂದು ಕೂಗಿದೆ. ಕದ ಬಡಿಯುತ್ತಲೇ ಇದ್ದ. ಕಡೆಗೆ ಶೌಚ ಮುಗಿಸಿ ಕದ ತೆಗೆಯುತ್ತಿದ್ದಂತೆ ಅಲ್ಲೇ ಇದ್ದ ವ್ಯಕ್ತಿ ಚಾಕುವಿನಿಂದ ಇರಿದ’ ಎಂದು ಶಸ್ತ್ರಚಿಕಿತ್ಸೆ ಬಳಿಕ ಲಕ್ಷ್ಮಿ ವಿಜಯವಾಣಿಗೆ ಪ್ರತಿಕ್ರಿಯಿಸಿದರು.
‘ನಾವಿದ್ದ ಬೋಗಿಯಲ್ಲಿದ್ದ ಕೆಲವು ಮಹಿಳೆಯರು ಹಿಂದಿನ ಸ್ಟಾಪ್‌ನಲ್ಲಿ ಇಳಿದಿದ್ದರು. ಚಾಕು ಇರಿದವನು ರೈಲಿಗೆ ಹೊರಗೆ ಹೋಗುತ್ತಿದ್ದುದಷ್ಟನ್ನು ನೋಡಿದೆ. ನಮ್ಮ ಮನೆಯವರು ಜಿಲ್ಲಾ ಆಸ್ಪತ್ರೆ (ಚಿಗಟೇರಿ) ಆಸ್ಪತ್ರೆಗೆ ನನ್ನನ್ನು ಕರೆತಂದರು. ಅದೇ ವೇಳೆಗೆ ಚಾಕು ಇರಿದಿದ್ದ ವ್ಯಕ್ತಿ ಕೂಡ ಗಾಯಗೊಂಡು ಅದೇ ಆಸ್ಪತ್ರೆಗೆ ಬಂದಿದ್ದ. ಅವನು ಧರಿಸಿದ್ದ ಪ್ಯಾಂಟ್ ಹಾಗೂ ಅದರ ಮೇಲೆ ಚೆಲ್ಲಿದ್ದ ರಕ್ತದ ಕಲೆ ನೋಡಿ ಅವನನ್ನು ಗುರುತಿಸಿದೆ’ ಎಂದು ಲಕ್ಷ್ಮಿ ಹೇಳಿದರು.
ಮಗನನ್ನು ನಾಲ್ಕನೇ ತರಗತಿಗೆ ಸೇರಿಸುವ ಸಂಬಂಧ ತುಮಕೂರು ಸಿದ್ಧಗಂಗಾ ಮಠದ ಶಾಲೆಯ ಅರ್ಜಿ ಪಡೆದು ಗುರುವಾರ ಬೆಳಗ್ಗೆ  ಹುಬ್ಬಳ್ಳಿ ಮೂಲಕ ಊರಿಗೆ ರೈಲಿನಲ್ಲಿ ವಾಪಸಾಗುತ್ತಿದ್ದೆವು. ಮಧ್ಯಾಹ್ನ 2-30ರ ವೇಳೆಗೆ ನನ್ನ ಪತ್ನಿ ಶೌಚಗೃಹಕ್ಕೆ ತೆರಳಿದಾಗ ಹಿಂಬಾಲಿಸಿದ್ದ ವ್ಯಕ್ತಿ, ಚಾಕುವಿನಿಂದ ಇರಿಯಲು ಯತ್ನಿಸಿದಾಗ ಪತ್ನಿ ಅಡ್ಡ ಹಿಡಿದ ಕೈಗೆ ಚಾಕು ಚುಚ್ಚಿದೆ ಎಂದು ಲಕ್ಷ್ಮಿ ಅವರ ಪತಿ ಮಹಾಂತೇಶ ಸವಟೂರು ವಿಜಯವಾಣಿಗೆ ತಿಳಿಸಿದರು.
ನಾವಿದ್ದ ಜನರಲ್ ಬೋಗಿಯಲ್ಲಿ ಕಡಿಮೆ ಜನರಿದ್ದರು. ಚಾಕು ಇರಿತಕ್ಕೆ ಒಳಗಾದ ಹೆಂಡತಿ ಚೀರಿದ್ದರಿಂದ ನಾನು ಅಲ್ಲಿಗೆ ಹೋಗುತ್ತಿದ್ದಂತೆ ಆರೋಪಿ ಹೆದರಿ, ರೈಲಿನ ಹೊರಭಾಗದ ಕಂಬಿ ಹಿಡಿದು ಪಕ್ಕದ ಬೋಗಿಗೆ ತೆರಳಲು ಯತ್ನಿಸಿದ್ದ. ಅವನು ಏನಾದ ಎಂಬುದು ತಿಳಿಯಲಿಲ್ಲ. ಹೆಂಡತಿಯ ಕೈಯಲ್ಲಿ ರಕ್ತ ಹರಿಯುತ್ತಿದ್ದರಿಂದ ಇತ್ತ ಗಮನ ನೀಡಿದೆ ಎಂದು ಹೇಳಿದರು.
‘ಅಮ್ಮನಿಗೆ ಚಾಕು ಚುಚ್ಚಿದವನು ಅದಕ್ಕೂ ಮುನ್ನ ನಾವಿದ್ದ ಕಡೆಗೆ ಎರಡು ಮೂರು ಬಾರಿ ಬಂದು ಹೋಗಿದ್ದ. ಅವನ ಕಿಸೆಯಲ್ಲಿ ಚಾಕು ಇದ್ದುದನ್ನು ನೋಡಿದ್ದೆ. ಆಮೇಲೆ ರೆಸ್ಟ್ ಮಾಡಿದೆ’ ಎಂದು ಮಗ ವಿಜಯಕುಮಾರ್ ಉತ್ತರಿಸಿದ.