ದಾವಣಗೆರೆ: ಇಂದಿನ ಮಕ್ಕಳಿಗೆ ಚನ್ನಮ್ಮನ ರಾಷ್ಟ್ರಪ್ರೇಮ, ರಾಷ್ಟ್ರೀಯತೆಯ ಪ್ರಜ್ಞೆಯನ್ನು ವಿಶಾಲ ಅರ್ಥದಲ್ಲಿ ಬಿತ್ತಬೇಕು. ಹಾಗಾದಾಗ ಇಂತಹ ಜಯಂತ್ಯುತ್ಸವ ಆಚರಣೆ ಸಾರ್ಥಕ್ಯ ಪಡೆಯಲಿದೆ ಎಂದು ನಿವೃತ್ತ ಪ್ರಾಚಾರ್ಯ ದಾದಾಪೀರ್ ನವಿಲೇಹಾಳ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ, ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜಾತಿ-ಧರ್ಮ ಮೀರಿ ‘ಹರಹರ ಮಹಾದೇವ’ ಘೋಷಣೆಯೊಂದಿಗೆ ಎಲ್ಲರನ್ನೂ ಒಗ್ಗೂಡಿಸಿದ ಭಾವೈಕ್ಯತೆಗೆ ಚನ್ನಮ್ಮ ಸಾಕ್ಷಿಯಾಗಿದ್ದಾಳೆ. ಸುಳ್ಳುಗಳೇ ವೈಭವೀಕರಿಸುವ ಈ ಕಾಲದಲ್ಲಿ ಕಿತ್ತೂರು ಚನ್ನಮ್ಮನ ಧರ್ಮಶ್ರದ್ಧೆ, ಆಡಳಿತ ಸೂಕ್ಷ್ಮಗಳ ಮೂಲಕ ನಾವು ಸತ್ಯದ ಕಾಲದತ್ತ ಹೊರಳಬೇಕಿದೆ ಎಂದು ಹೇಳಿದರು.
ಇತಿಹಾಸ ಎಂದರೆ ಸತ್ತು ಹೋದದ್ದಲ್ಲ. ಇತಿಹಾಸವನ್ನು ಪುರಾಣವಾಗಿಯೂ, ಪುರಾಣವನ್ನು ಇತಿಹಾಸವಾಗಿಯೂ ನೋಡುವುದು ಅಪಾಯಕಾರಿ. ಇತಿಹಾಸದಲ್ಲಿನ ಒಳ್ಳೆಯ ಸಂಗತಿಗಳನ್ನು ವರ್ತಮಾನಕ್ಕೆ ಜೋಡಿಸಿಕೊಳ್ಳಬೇಕೇ ಹೊರತು ಚರಿತ್ರೆಯ ವಿಕೃತಿಯನ್ನಲ್ಲ ಎಂದರು.
ಕಿತ್ತೂರು ಚನ್ನಮ್ಮ ಯುದ್ಧಪಿಪಾಸು ಆಗಿರಲಿಲ್ಲ, ಸಂಯಮಿ ಆಗಿದ್ದಳು. ರಕ್ತಪಾತ ಬಯಸದೆ ಸಂಸ್ಕಾರ, ದೇಶದ ಸ್ವಾಭಿಮಾನ ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಅನೇಕ ಬಾರಿ ಸಂಧಾನ ನಡೆಸಿದ್ದಳು. ಆಡಳಿತ ನಡೆಸುವವರಿಗೆ ಯುದ್ಧವೇ ಅಂತಿಮವಲ್ಲ. ಸಹಬಾಳ್ವೆ ಮತ್ತು ದೂರದೃಷ್ಟಿ ಮೊದಲಾದ ಬದುಕಿನ ಮೌಲ್ಯಗಳನ್ನು ಚನ್ನಮ್ಮನಲ್ಲಿ ಕಾಣಬಹುದು ಎಂದರು.
ಭಾರತೀಯ ಇತಿಹಾಸದಲ್ಲಿ, ರಾಜನ ಪತ್ನಿಯಾದ ಮಾತ್ರಕ್ಕೆ ರಾಣಿ ಆದವರು ಹಲವರಿದ್ದಾರೆ. ಆದರೆ ರಣರಂಗದಲ್ಲಿ ಗಂಡುಡುಗೆ ತೊಟ್ಟು ಕತ್ತಿಯೊಂದಿಗೆ ಹೋರಾಟ ಮಾಡಿದ ಅಪರೂಪದ ರಾಣಿಯರಲ್ಲಿ ಕಿತ್ತೂರು ಚನ್ನಮ್ಮ ಮೊದಲಿಗಳು. ಗಂಡನ ಆಶ್ರಯವಿಲ್ಲದೇ ದೇಶ ಆಳಬಲ್ಲೆ ಎಂದು ಆಕೆ ತೋರಿಸಿದಳು. ನಂತರದ ಸಾಲಿನಲ್ಲಿ ಝಾನ್ಸಿ ಬಾಯಿ ಲಕ್ಷ್ಮೀಬಾಯಿ, ರಜಿಯಾಬೇಗಂ ನಿಲ್ಲುತ್ತಾರೆ ಎಂದು ಹೇಳಿದರು.
ಚನ್ನಮ್ಮ, ಇಂಗ್ಲಿಷರ ದೊಡ್ಡ ಸೈನ್ಯದೆದುರು ಕಪ್ಪ ಕೊಡುವುದಿಲ್ಲ ಎಂದು ಧೈರ್ಯವಾಗಿ ಹೇಳಿದ ಛಲಗಾತಿ. ತನ್ನ ಕೊನೆಗಾಲದಲ್ಲೂ ಕಿತ್ತೂರು ಮುಂದೊಂದು ದಿನ ಸ್ವಾತಂತ್ರೃ ಪಡೆಯಲಿದೆ ಎಂಬ ಆಶಾವಾದ ಹೊಂದಿದ್ದಳು. ಭಾರತದಲ್ಲಿ ಮೊದಲು ಚನ್ನಮ್ಮ, ಸ್ವಾತಂತ್ರೃದ ಬೀಜ ಮಂತ್ರವಾದರೆ ಅದು ಫಲ ನೀಡಿದ್ದು ಮಹಾತ್ಮ ಗಾಂಧೀಜಿ ಕಾಲದಲ್ಲಿ. ಗಾಂಧೀಜಿ ಪಾಲಿಗೂ ಚನ್ನಮ್ಮ ಮಿಂಚಾಗಿ ಕಂಡುಬಂದಳು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ, ಕಿತ್ತೂರು ಚನ್ನಮ್ಮನ ಸ್ವಾತಂತ್ರೃದ ಹೋರಾಟದ ಫಲವಾಗಿ ನಮಗಿಂದು ನೆಮ್ಮದಿ ದಕ್ಕಿದೆ. ಕಷ್ಟಕಾಲದಲ್ಲೂ ದೇಶ ಉಳಿಸುವ ಆಕೆಯ ಹೋರಾಟ ಇಂದಿನ ಮಹಿಳೆಯರಿಗೆ ಸ್ಪೂರ್ತಿಯಾಗಬೇಕು ಎಂದರು.
ಇಂದು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಿದೆ. ಹೀಗಾಗಿ ಎಲ್ಲ ಮಹಿಳೆಯರೂ ಚನ್ನಮ್ಮನ ರೀತಿಯಲ್ಲಿ ಹೋರಾಟ ಮಾಡಬೇಕಿದೆ. . ಚನ್ನಮ್ಮನಂತೆ ಖಡ್ಗದ ಬದಲಾಗಿ ಲೇಖನಿ ಹಿಡಿದು ಸಮಾಜವನ್ನು ಬದಲಾವಣೆ ಮಾಡಬೇಕಿದೆ ಎಂದು ಹೇಳಿದರು.
ದಾರ್ಶನಿಕರು, ಪ್ರಮುಖರ ಹೆಸರಲ್ಲಿ ಸಂಘ ಸಂಸ್ಥೆ ಕಟ್ಟಿಕೊಳ್ಳುವವರು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದ ಅವರು, ಅತಿ ದೊಡ್ಡ ಸಮುದಾಯವಾದ ಪಂಚಮಸಾಲಿ ಸಮಾಜ, ಕೃಷಿ ಅವಲಂಬಿತವಾಗಿದೆ. ಸಮಾಜದ ಬೇಡಿಕೆಗಳಿಗೆ ಸಚಿವರ ಜತೆಯಾಗಿ ಸ್ಪಂದಿಸಲಿದ್ದೇನೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ ಅಕ್ಟೋಬರ್ 23ನೇ ದಿನವು ಕಿತ್ತೂರು ಚನ್ನಮ್ಮನ ವಿಜಯೋತ್ಸವದ ದಿನವಾಗಿದೆ. ರಾಜ್ಯ ಸರ್ಕಾರ ಕೇವಲ ಜಯಂತ್ಯುತ್ಸವ ಆಚರಿಸುತ್ತಿದೆ. ಇದನ್ನು ವಿಜಯೋತ್ಸವದಿನವಾಗೀ ಆಚರಿಸಬೇಕು ಎಂದು ಸಲಹೆ ನೀಡಿದರು.
ಮೊಬೈಲ್ ಗೀಳಿಗೆ ಸಿಲುಕಿರುವ ಇಂದಿನ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಸಂಪ್ರದಾಯ ಮರೆಯಾಗಿದೆ. ಅವರಿಗೆ ಚನ್ನಮ್ಮನ ಜೀವನದ ಇತಿಹಾಸ ತಿಳಿಸಿದಲ್ಲಿ ದೇಶಭಕ್ತಿ ಬೆಳೆಯಲಿದೆ. ಸಂಸ್ಕಾರ ಕಲಿತರೆ ದೇಶಕ್ಕೆ ಒಳಿತಾಗಲಿದೆ ಎಂದರು.
ಸಮಾಜದ ಮುಖಂಡ ಅಶೋಕ್ ಗೋಪನಾಳ್ ದಾವಣಗೆರೆ ನಗರದಲ್ಲಿ ಕಿತ್ತೂರು ಚನ್ನಮ್ಮನ ಪ್ರತಿಮೆ ಸ್ಥಾಪನೆ ಇನ್ನೂ ಸಾಕಾರವಾಗಿಲ್ಲ. ಸಮಾಜದವರೇ ಹಣ ಸೇರಿಸಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಕೆ.ಎಚ್.ಚನ್ನಬಸಪ್ಪ, ಉದ್ಯಮಿ ಬಕ್ಕೇಶ್, ವಾಣಿ ಬಕ್ಕೇಶ್, ಸುಷ್ಮಾ ಪಾಟೀಲ್ ಇತರರಿದ್ದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚನ್ನಮ್ಮನ ಕುರಿತು ನೃತ್ಯರೂಪಕ ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಯಿತು.