ಜಿಲ್ಲೆ

24ರಿಂದ ದಕ್ಷಿಣ ಭಾರತ ಮಟ್ಟದ ಖೋ-ಖೋ ಪಂದ್ಯಾವಳಿ

ಡಿ. ಎಂ. ಮಹೇಶ್

ದಾವಣಗೆರೆ: ದಾವಣಗೆರೆಯಲ್ಲಿ ಚೊಚ್ಚಲ ಬಾರಿಗೆ, ಅ.24ರಿಂದ 26ರವರೆಗೆ ಹಿರಿಯ ಪುರುಷರು, ಮಹಿಳೆಯರ ವಿಭಾಗದ ದಕ್ಷಿಣ ಭಾರತ ಮಟ್ಟದ 31ನೇ ಖೋ-ಖೋ ಚಾಂಪಿಯನ್‌ಶಿಪ್ ಪಂದ್ಯಾವಳಿ ಆಯೋಜಿಸಲಾಗಿದೆ.

ದಕ್ಷಿಣ ಭಾರತ ಖೋ-ಖೋ ಕಮಿಟಿ, ಕರ್ನಾಟಕ ಖೋ-ಖೋ ಸಂಸ್ಥೆ, ದಾವಣಗೆರೆ ಜಿಲ್ಲಾ ಖೋ-ಖೋ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ದೂಡಾ ಸಹಕಾರದೊಂದಿಗೆ ಈ ಪಂದ್ಯಾವಳಿ ನಡೆಯಲಿದೆ ಎಂದು ಕರ್ನಾಟಕ ಖೋ-ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ, ಜಿಲ್ಲಾ ಖೋ-ಖೋ ಸಂಸ್ಥೆ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ ಹಾಗೂ ತೆಲಂಗಾಣ ರಾಜ್ಯಗಳಿಂದ ತಲಾ 6 ಪುರುಷರು, ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ತಲಾ 90 ಪುರುಷ, ಮಹಿಳಾ ಪಟುಗಳು, 36 ಜನ ತರಬೇತುದಾರರು, ವ್ಯವಸ್ಥಾಪಕರು, 30 ಜನ ತಾಂತ್ರಿಕ ಅಧಿಕಾರಿಗಳು, ಅಧಿಕಾರಿಗಳು,್ತ ಸ್ವಯಂಸೇವಕರು ಸೇರಿ ಒಟ್ಟು 300 ಜನರು ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.

ಟೂರ್ನಿಗೆ 15ರಿಂದ 20 ಲಕ್ಷ ರೂ. ವೆಚ್ಚವಾಗಲಿದೆ. ರೌಂಡ್ ರಾಬಿನ್ ಮಾದರಿ ಹಾಗೂ ರಾಷ್ಟ್ರೀಯ ಖೋ-ಖೋ ಫೆಡರೇಷನ್‌ನ ಹೊಸ ನಿಯಮ (6 ಪ್ಲಸ್ 1 ಕೋನ)ದಂತೆ ನಿತ್ಯ ಬೆಳಗ್ಗೆ 8ರಿಂದ 11 ರವರೆಗೆ, ಸಂಜೆ 4ರಿಂದ ರಾತ್ರಿ 10ರ ವರೆಗೆ ಹಾಗೂ ಅ.26ರಂದು ಬೆಳಗ್ಗೆ 11ರಿಂದ ಪಂದ್ಯಗಳು ನಡೆಯಲಿವೆ.

ಜಿಲ್ಲಾ ಕ್ರೀಡಾಂಗಣದ 2 ಮ್ಯಾಟ್ ಅಂಕಣ ಸಿದ್ಧಪಡಿಸಲಾಗುತ್ತಿದೆ. ಒಂದರಲ್ಲಿ ಹೊನಲು ಬೆಳಕಿನ ಆಟ ನಡೆಯಲಿದೆ. ವಿಜೇತ ತಲಾ 4 ಪುರುಷ / ಮಹಿಳಾ ತಂಡಗಳಿಗೆ ಪ್ರಶಸ್ತಿಪತ್ರ, ಪದಕ ಹಾಗೂ ತಂಡದ ಟ್ರೋಫಿ ನೀಡಲಾಗುವುದು. ಅತ್ಯುತ್ತಮ ಪ್ರದರ್ಶನ ನೀಡಿದ ಪುರುಷ- ಮಹಿಳಾ ಆಟಗಾರರಿಗೆ ಕ್ರಮವಾಗಿ ಮದಕರಿ ನಾಯಕ, ಒನಕೆ ಓಬವ್ವ ಪ್ರಶಸ್ತಿ ಜತೆಗೆ ಉತ್ತ್ತಮ ಹಿಡಿತಗಾರ, ಉತ್ತಮ ಓಟಗಾರ, ಉದಯೋನ್ಮುಖ ಆಟಗಾರ, ಸರ್ವಾಂಗೀಣ ಆಟಗಾರ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

ಮಹಿಳಾ ಕ್ರೀಡಾಪಟುಗಳು, ಮಹಿಳಾ ತರಬೇತುದಾರರು, ವ್ಯವಸ್ಥಾಪಕರಿಗೆ ಸಿದ್ಧ್ದಗಂಗಾ ವಿದ್ಯಾಸಂಸ್ಥೆಯು ಊಟ- ವಸತಿ ಜತೆಗೆ ಪ್ರಶಸ್ತಿಗಳನ್ನು ನೀಡಲಿದೆ. ಪುರುಷ ಆಟಗಾರರಿಗೆ ಬಾಪೂಜಿ ಮೆಡಿಕಲ್ ವಸತಿ ನಿಲಯದಲ್ಲಿ ವಸತಿ ಒದಗಿಸಲಾಗುವುದು. ವಿವಿಧ ರಾಜ್ಯಗಳ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಹಾಗೂ ದಕ್ಷಿಣ ಭಾರತ ಕಮಿಟಿ ಹಾಗೂ ರಾಜ್ಯ ಖೋ-ಖೋ ಸಂಸ್ಥೆಯ ಪದಾಧಿಕಾರಿಗಳಿಗೆ ನಗರದ ಸರ್ಕಿಟ್ ಹೌಸ್, ಪ್ರವಾಸಿಮಂದಿರ, ವಸತಿ ಗೃಹಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿವರಿಸಿದರು.

ಕರ್ನಾಟಕ ಖೋ-ಖೋ ಸಂಸ್ಥೆಯು ಐವತ್ತನೇ ವರ್ಷಕ್ಕೆ ಕಾಲಿಟ್ಟಿದ್ದು, ಡಿಸೆಂಬರ್‌ನಲ್ಲಿ ಬೆಂಗಳೂರಲ್ಲಿ ರಾಷ್ಟ್ರೀಯ ಜೂನಿಯರ್ ಖೋಖೋ ಚಾಂಪಿಯನ್‌ಶಿಪ್‌ನೊಂದಿಗೆ ಸುವರ್ಣ ಮಹೋತ್ಸವ ಆಚರಿಸಲಾಗುವುದು ಎಂದು ಲೋಕೇಶ್ವರ ತಿಳಿಸಿದರು.

ದಕ್ಷಿಣ ಭಾರತ ಮಟ್ಟದ 31ನೇ ಖೋ-ಖೋ ಪಂದ್ಯಾವಳಿಗೆ ಅ. 24ರ ಸಂಜೆ 6-30ಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು. ದೆಹಲಿಯ ಕೆಕೆಎಫ್‌ಎ ಆಡಳಿತಾಧಿಕಾರಿ ಎಂ.ಎಸ್. ತ್ಯಾಗಿ, ಕೆ.ಎಸ್.ಕೆ.ಕೆ.ಎ. ಉಪಾಧ್ಯಕ್ಷ ಸೀತರಾಮ ರೆಡ್ಡಿ, ಸಿದ್ದಗಂಗಾ ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಡಿಸಿ ಜಿ.ಎಂ.ಗಂಗಾಧರಸ್ವಾಮಿ, ದಕ್ಷಿಣ ಭಾರತ ಖೋ-ಖೋ ಕಮಿಟಿ ಚೇರ್ಮನ್ ಜಂಗರಾಘವ ರೆಡ್ಡಿ, ಉಪಾಧ್ಯಕ್ಷ ಜಿ.ವಿ.ಪಿಳೈ, ಅರ್ಜುನ ಪ್ರಶಸ್ತಿ ವಿಜೇತೆ ಶೋಭಾ ನಾರಾಯಣ, ರಾಜ್ಯ ಸಂಘದ ಗೌರವ ಕಾರ್ಯದರ್ಶಿ ಜಿ.ರಾಮಲಿಂಗಪ್ಪ ಇತರರು ಭಾಗವಹಿಸುವರು.

ಅ.26ರಂದು ಮಧ್ಯಾಹ್ನ 12-30ಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಹುಮಾನ ವಿತರಿಸುವರು. ದಕ್ಷಿಣ ಭಾರತ ಖೋಖೋ ಕಮಿಟಿ ಕನ್ವೀನಿಯರ್ ನೆಲ್ಸನ್ ಸ್ಯಾಮುಯೆಲ್ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಸ್ಥೆ ಗೌರವ ಕಾರ್ಯದರ್ಶಿ ಶಿವಯೋಗಿ ಎಲಿ, ಜೆ. ರಾಮಲಿಂಗಪ್ಪ, ಡಿ.ಎಸ್.ಶಿವಕುಮಾರ್, ಚಂದ್ರಶೇಖರ್, ಮಲ್ಲಿಕಾರ್ಜುನ್, ಶಶಿ ಹುಲಿಕುಂಟೇಮಠ, ಎನ್.ಕೆ. ಕೊಟ್ರೇಶ್, ರಘು ಇತರರಿದ್ದರು.

---