ಜಿಲ್ಲೆ

ಕರ್ನಾಟಕ-ಕೇರಳ ಚಾಂಪಿಯನ್ ದಕ್ಷಿಣ ಭಾರತ ಖೋ-ಖೋ ಟೂರ್ನಿ

ಡಿ. ಎಂ. ಮಹೇಶ್

ದಾವಣಗೆರೆ: ಕರ್ನಾಟಕ ವನಿತೆಯರು, ಕೇರಳ ಪುರುಷರು ಭಾನುವಾರ ಇಲ್ಲಿ ಸಂಪನ್ನಗೊಂಡ ದಕ್ಷಿಣ ಭಾರತ ಮಟ್ಟದ 31ನೇ ಹಿರಿಯರ ಖೋ-ಖೋ ಪಂದ್ಯಾವಳಿಯ ಚಾಂಪಿಯನ್ನರಾಗಿ ಹೊರಹೊಮ್ಮಿದರು.

ರೌಂಡ್ ರಾಬಿನ್ ಮಾದರಿಯಡಿ ಜಿಲ್ಲಾ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ, ಮಹಿಳೆಯರ ಅಂತಿಮ ಹಣಾಹಣಿಯಲ್ಲಿ ಆತಿಥೇಯ ಕರ್ನಾಟಕ ತಂಡ, ಎದುರಾಳಿ ಕೇರಳ ತಂಡವನ್ನು ದಿಟ್ಟ ಹೋರಾಟದೊಂದಿಗೆ 36-10ರಲ್ಲಿ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಕರ್ನಾಟಕ, ಏಕಪಕ್ಷೀಯ ಮತ್ತು ಚುರುಕಿನ ಆಟದೊಂದಿಗೆ ಗೆಲುವು ದಕ್ಕಿಸಿಕೊಂಡಿತು. ಪ್ರೇಕ್ಷಕರು ಕರತಾಡನದೊಂದಿಗೆ ಆತಿಥೇಯರನ್ನು ಅಭಿನಂದಿಸಿದರು.

ನಾಯಕಿ ಮೈಸೂರಿನ ಮೋನಿಕಾ, ವಿಶ್ವಕಪ್‌ನ ಚಾಂಪಿಯನ್ ಆಟಗಾರ್ತಿ ಬಿ. ಚೈತ್ರಾ, ಮಾನ್ಯಾ, ದಿವ್ಯಾ ಮತ್ತು ಶೀತಲ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು. ಕೇರಳ ಆಟಗಾರ್ತಿಯರಾದ ಸಿಜಿದಾ, ಆದಿತ್ಯಾ, ಆಶ್ಮಾ ಪ್ರಯತ್ನ ಫಲಿಸದೆ ರನ್ನರ್ ಅಪ್‌ಗೆ ಖುಷಿ ಪಟ್ಟುಕೊಂಡರು. ತಮಿಳುನಾಡು ಮಹಿಳೆಯರು ಮೂರನೇ ಸ್ಥಾನ ಪಡೆದರು.

ಎದುರಾಳಿ ಕೇರಳ ವಿರುದ್ಧದ ಆತಿಥೇಯ ಪುರುಷರ ಅಂತಿಮ ಪಂದ್ಯದ ಸೆಣಸಾಟ ಕುತೂಹಲ ಮೂಡಿಸಿತ್ತು. ಕೇರಳ ಆಟಗಾರರು ಮಿಂಚಿನ ಓಟ, ಆಕರ್ಷಕ ನೆಗೆತದೊಂದಿಗೆ ಶುಭಾರಂಭ ಮಾಡಿದರು.

ಕರ್ನಾಟಕದ ಆಟಗಾರರು ಸತತ ಪ್ರಯತ್ನದ ನಡುವೆಯೂ ಮೂರನೇ ಸರದಿಯವರೆಗೆ 16 ಅಂಕಗಳ ಹಿನ್ನಡೆ ಕಂಡರು. ಕೊನೆಯ ಸರದಿಯಲ್ಲಿ ಇನ್ನಿಲ್ಲದ ಹೋರಾಟ ನಡೆಸಿದರಾದರೂ 5 ಅಂಕದ (25-30) ಅಂತರದಲ್ಲಿ ಕರ್ನಾಟಕ, ಸನಿಹದಲ್ಲಿದ್ದ ಗೆಲುವನ್ನು ಕೈಚೆಲ್ಲಿತು. ಕಾಲಿಗೆ ಪಟ್ಟು ಕಟ್ಟಿಕೊಂಡು ಅಂಕಣಕ್ಕಿಳಿದಿದ್ದ ಗಾಯಾಳು, ತಂಡದ ನಾಯಕ ಮಹ್ಮದ್ ತಾಸಿನ್ ನಿರೀಕ್ಷಿತ ಯಶ ಕಾಣಲಿಲ್ಲ. ಕೇರಳ ಚಾಂಪಿಯನ್ ಪ್ರಶಸ್ತಿ ಅಪ್ಪಿಕೊಂಡಿತು.

ಕೇರಳ ಪರವಾಗಿ ಬಿಚು, ನಿಖಿಲ್, ಮಿಥುನ್ ಅಶ್ವಿನ್ ಉತ್ತಮ ಪ್ರದರ್ಶನ ನೀಡಿದರು. ಬೆಳಗಾವಿಯ ಆದಿತ್ಯ ಪಾಟೀಲ್, ಭದ್ರಾವತಿಯ ಐಮನ್ ಪಾಷಾ, ಬೆಂಗಳೂರಿನ ವಿಶಾಲ್, ದಕ್ಷಿಣಕನ್ನಡದ ಮರಿಯಪ್ಪ ಕರ್ನಾಟಕ ತಂಡಕ್ಕೆ ಬಲ ತುಂಬಿದರು. ಆಂಧ್ರಪ್ರದೇಶ ಪುರುಷರು ತೃತೀಯ ಸ್ಥಾನಕ್ಕೆ ಪಾತ್ರರಾದರು.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕೇರಳ ತಂಡದ ಬಿಚು ಹಾಗೂ ಕರ್ನಾಟಕದ ಬಿ. ಚೈತ್ರಾ ಕ್ರಮವಾಗಿ ಮದಕರಿನಾಯಕ ಹಾಗೂ ಒನಕೆ ಓಬವ್ವ ಪ್ರಶಸ್ತಿ ಪಡೆದರು. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಆಂಧ್ರಪ್ರದೇಶದ ಕುಮಾರಿ ಉತ್ತಮ ಡಿಫೆಂಡರ್, ತಮಿಳುನಾಡಿನ ಜಯಶ್ರೀ ಉತ್ತಮ ಅಟ್ಯಾಕರ್, ಕೇರಳದ ಕಾವ್ಯಾ ಕೃಷ್ಣ ಉತ್ತಮ ಆಲ್‌ರೌಂಡರ್ ಹಾಗೂ ಕರ್ನಾಟಕದ ಮಾನ್ಯಾ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಕರ್ನಾಟಕದ ಆದಿತ್ಯ ಪಾಟೀಲ್ ಉತ್ತಮ ಆಲ್‌ರೌಂಡರ್, ತೆಲಂಗಾಣದ ಜಿ. ದಿನೇಶ್ ಉತ್ತಮ ಡಿಫೆಂಡರ್, ಆಂಧ್ರಪ್ರದೇಶದ ಮರಿಶೆಟ್ಟಿ ಉತ್ತಮ ಅಟ್ಯಾಕರ್, ತಮಿಳುನಾಡಿನ ಜೆ. ಅಲ್ಲೆನ್ಸ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದರು. ದಕ್ಷಿಣ ಭಾರತ ಖೋ-ಖೋ ಕಮಿಟಿ, ಕರ್ನಾಟಕ ಹಾಗೂ ಜಿಲ್ಲಾ ಖೋ-ಖೋ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಟೂರ್ನಿಯಲ್ಲಿ ಆರು ರಾಜ್ಯಗಳ 90 ಪಟುಗಳು ಭಾಗಿಯಾಗಿದ್ದರು.

ಸಮಾರೋಪದಲ್ಲಿ ದಕ್ಷಿಣ ಭಾರತ ಖೋಖೋ ಕಮಿಟಿ ಕನ್ವೀನಿಯರ್ ನೆಲ್ಸನ್ ಸ್ಯಾಮುಯೆಲ್, ಮುತ್ತುಕೃಷ್ಣನ್, ದಿನೇಶ್ ಕೆ. ಶೆಟ್ಟಿ, ಡಿ.ಎಸ್. ಹೇಮಂತ್, ಗಡಿಗುಡಾಳು ಮಂಜುನಾಥ್ ಬಹುಮಾನ ವಿತರಿಸಿದರು. ಜಿ.ರಾಮಲಿಂಗಪ್ಪ, ಶ್ರೀಹರ್ಷ, ಕೃಷ್ಣಮೂರ್ತಿ, ನಾಯರ್, ವಾಣಿ, ಶಿವಯೋಗಿ ಎಲಿ, ಕಬಡ್ಡಿ ಮಲ್ಲಿಕಾರ್ಜುನ್ ಇತರರಿದ್ದರು.