ದಾವಣಗೆರೆ: ಬಸವಣ್ಣನವರು ಹಾಗೂ ಬಸವ ಧರ್ಮದಿಂದಾಗಿ ಕನ್ನಡ, ಧರ್ಮದ ಭಾಷೆಯಾಗಿದೆ. ಇದು ಮಾನವೀಯ ಇತಿಹಾಸ ಹೊಂದಿದೆ. ಜತೆಗೆ ಜಗತ್ತಿಗೇ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟಿದೆ ಎಂದು ಹಿರಿಯ ಸಾಹಿತಿ ರಂಜಾನ್ ದರ್ಗಾ ಪ್ರತಿಪಾದನೆ ಮಾಡಿದರು.
ನಗರಪಾಲಿಕೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಜಗತ್ತಿನ ಸಾವಿರಾರು ಭಾಷೆಗಳಲ್ಲಿ ಧರ್ಮದ ಭಾಷೆಗಳು ಕೇವಲ 15 ಇವೆ. ಅದರಲ್ಲಿ ಕನ್ನಡವೂ ಒಂದು. ಹಿಂದಿ, ಉರ್ದು, ತಮಿಳು, ತೆಲುಗು, ಇಂಗ್ಲಿಷ್, ಪ್ರೆಂಚ್, ಜರ್ಮನ್ ಇವ್ಯಾವೂ ಕೂಡ ಧರ್ಮದ ಭಾಷೆಗಳಲ್ಲ. ಯಾವ ಭಾಷೆಗೆ ಧರ್ಮಗ್ರಂಥವಿದೆಯೋ ಅದುವೇ ಧರ್ಮದ ಭಾಷೆ. ವಚನಗಳಲ್ಲಿ ಲಿಂಗಾಯತ ಧರ್ಮದ ಸಾರವಿದೆ ಎಂದು ಹೇಳಿದರು.
ಮಾನವೀಯತೆ, ಸಹಬಾಳ್ವೆ, ಸಮಾನತೆ ಎತ್ತಿ ಹಿಡಿದ ಭಾಷೆ ಇದ್ದರೆ ಅದುವೇ ಕನ್ನಡ. ಕನ್ನಡ ಮೊದಲ ಲಕ್ಷಣ ಗ್ರಂಥ ಕವಿರಾಜಮಾರ್ಗದಲ್ಲಿ ಅನ್ಯ ಧರ್ಮಗಳನ್ನು ಗೌರವದಿಂದ ಕಾಣುವವರ ಮನಸ್ಸು ಅಪರಂಜಿ ಎಂಬುದಾಗಿ ಕನ್ನಡಿಗರನ್ನು ಕುರಿತು ಹೇಳಲಾಗಿದೆ. ಒಬ್ಬನೇ ದೇವರು, ಒಂದೇ ಮಾನವಕುಲ ಎಂಬುದನ್ನು ಕವಿ ಪಂಪ ಕೂಡ ಹೇಳಿದ್ದಾನೆ ಎಂದು ಉಲ್ಲೇಖಿಸಿದರು.
12ನೇ ಶತಮಾನದಲ್ಲಿನ ಅನುಭವಮಂಟಪದ ಮೂಲಕ ಜಗತ್ತಿಗೆ ಶರಣರು ಸಂವಿಧಾನದ ಪಾಠ ಕಲಿಸಿದರು. ಸ್ತ್ರೀ ಸಮಾನತೆ, ದುಡಿವ ವರ್ಗದ ಸಮಾನತೆ ತಂದುಕೊಟ್ಟಿದೆ ಎಂಬುದನ್ನು 2013ರಲ್ಲಿ ಇಂಗ್ಲೆಂಡಿನ ಸ್ಪೀಕರ್ ಜಾನ್ ಬರ್ಕೋವ್ ಹೇಳಿರುವ ಇತಿಹಾಸವಿದೆ. ಇದೇ ಕಾರಣಕ್ಕೆ ಅಲ್ಲಿ ಬಸವಣ್ಣನವ ಮೂರ್ತಿ ಸ್ಥಾಪನೆಗೆ ಕಾರಣವಾಯಿತು ಎಂದು ಹೇಳಿದರು.
ಬಸವಾದಿ ಶಿವಶರಣರು ನೀಡಿದ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯು, ವಿಶ್ವಸಂಸ್ಥೆಯಲ್ಲಿ ನೀಡಲಾದ 30 ಅಂಶಗಳ ಮಾನವ ಹಕ್ಕುಗಳನ್ನು ಒಳಗೊಂಡಿದೆ. ಅಕ್ಕಮಹಾದೇವಿಗೂ ಮುನ್ನ ದಲಿತ ಮಹಿಳಾ ವಚನಕಾರ್ತಿ ಸತ್ಯಕ್ಕ ವಚನ ಬರೆಯುವಾಗ, 10ನೇ ಶತಮಾನದಲ್ಲಿ ಕನ್ನಡದ ಮಹಾಕಾವ್ಯ ರಚನೆಯಾದಾಗ ಇಂಗ್ಲಿಷ್‌ನ ಒಂದು ಸಾಲಿನ ಸಾಹಿತ್ಯ ಕೂಡ ಸೃಷ್ಟಿಯಾಗಿರಲಿಲ್ಲ ಎಂದು ಸಮರ್ಥಿಸಿಕೊಂಡರು.
ಕನ್ನಡ ಧರ್ಮದಲ್ಲಿ ಶೇಷ್ಠ ಇಂತನೆ ಇದೆ. ಏಕದೇವೋಪಾಸನೆ ತತ್ವ ನೀಡಿದ ಈ ಧರ್ಮ ಕೇವಲ ಲಿಂಗಾಯತರಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಕನ್ನಡಿಗರದಾಗಿದೆ. ಶಿವಶರಣರು ಇದನ್ನು ತತ್ವಜ್ಞಾನದ ಭಾಷೆಯಾಗಿಸಿದರು. ಇದರ ಮೂಲಕ ಅನುಭಾವದ ದರ್ಶನವನ್ನೇ ಮಾಡಿಸಿದರು. ವೈರಿಯನ್ನು ಗೆಲ್ಲುವುದಷ್ಟೇ ಅಲ್ಲದೆ ದುರ್ಬಲರನ್ನು ಪ್ರೀತಿಸುವ ಹಾಗೂ ತ್ಯಾಗದ ಮುದ್ರೆ ಇರಬೇಕೆಂಬುದನ್ನು ಪಂಪ ಹೇಳಿದ್ದು ಇದು ಕನ್ನಡದ ಮಾನವೀಯ ಇತಿಹಾಸದ ಧ್ಯೋತಕವಾಗಿದೆ ಎಂದರು.
ಕನ್ನಡದ ಬಾವುಟದ ಬಣ್ಣಗಳಾದ ಹಳದಿ ಮತ್ತು ಕೆಂಪು ಅರಿಶಿಣ- ಕುಂಕುಮದ ಸಂಕೇತವಾಗಿವೆ. ಮಹಿಳೆಯರನ್ನು ಗೌರವಿಸುವ ಹಾಗೂ ಮಂಗಳಕರ ಸಮಾಜ ನಿರ್ಮಾಣವನ್ನು ಇದು ಹೇಳುತ್ತದೆ. ರಾಜ್ಯೋತ್ಸವದಲ್ಲಿ ಈ ಬಾರಿ ಅಮೃತ ಪುರುಷರಿಗೆ ಪೌರ ಸನ್ಮಾನ ನೀಡಿ ಗೌರವಿಸಲಾಗಿದೆ. ಮುಂದಿನ ವರ್ಷ, ಐವರು ಅಮೃತ ಮಹಿಳೆಯರನ್ನೂ ಗುರುತಿಸಿ ಗೌರವಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ವರ್ತಕ ಚನ್ನಗಿರಿ ಸಿ.ಆರ್. ವಿರುಪಾಕ್ಷಪ್ಪ, ಖ್ಯಾತ ವೈದ್ಯ ಡಾ.ಎಸ್.ಎಂ. ಎಲಿ, ಶಿಕ್ಷಣ ತಜ್ಞ ಕೆ.ಇಮಾಂ ಅವರಿಗೆ ನಾಗರಿಕ ಪೌರ ಸನ್ಮಾನ ನೀಡಿ ಗೌರವಿಸಲಾಯಿತು. ಸ್ವಭಾಷಾ ನಿಷ್ಠೆ ಹಾಗೂ ಪರಭಾಷಾ ಸಹಿಷ್ಣುತೆ ಉಳಿಸಿಕೊಂಡಲ್ಲಿ ಅಭಿವೃದ್ಧಿ ಕಾಣಬಹುದು ಎಂದು ಡಾ. ಎಲಿ ಹೇಳಿದರು.
53 ವರ್ಷದ ಹಿಂದೆ ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಸಂಬಳ ಕೊಡಲು ಸಹ ಹಣವಿರಲಿಲ್ಲ. ಈಗ ಪಾಲಿಕೆಯಲ್ಲಿ ಹೆಚ್ಚು ಆದಾಯವಿದೆ. ಹೀಗಾಗಿ ಅದ್ದೂರಿತನದ ಕಾರ್ಯಕ್ರಮ ನಡೆದಿದೆ. ಮುಂದಿನ ಅವಧಿಯಲ್ಲಿ ನಮ್ಮ ಪಕ್ಷವೇ ಆಡಳಿತಕ್ಕೆ ಬರಲಿದ್ದು ಆಗ ಇನ್ನಷ್ಟು ಅದ್ದೂರಿ ರಾಜ್ಯೋತ್ಸವ ಆಚರಣೆ ಮಾಡೋಣ ಎಂದು ಶಿವಶಂಕರಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮೇಯರ್ ಕೆ. ಚಮನ್‌ಸಾಬ್, ನಟ ಪೃಥ್ವಿ ಶಾಮನೂರು, ಉಪಮೇಯರ್ ಸೋಗಿ ಶಾಂತಕುಮಾರ್, ಶಾಸಕ ಶಿವಗಂಗಾ ಬಸವರಾಜ್, ಎಂಎಲ್ಸಿ ನವೀನ್, ಮಾಜಿ ಸಚಿವ ಎಚ್. ಆಂಜನೇಯ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಎಸ್ಪಿ ಉಮಾ ಪ್ರಶಾಂತ್, ತಹಸೀಲ್ದಾರ್ ಎಂ.ಬಿ.ಅಶ್ವಥ್, ವಿಪಕ್ಷನಾಯಕ ಪ್ರಸನ್ನಕುಮಾರ್, ಆಯುಕ್ತೆ ರೇಣುಕಾ, ಪತ್ರಕರ್ತರಾದ ಬಿ.ಎನ್.ಮಲ್ಲೇಶ್, ಇ.ಎಂ. ಮಂಜುನಾಥ್, ಪುರಪಿತೃಗಳು ಇದ್ದರು. ಸರಿಗಮಪ ತಂಡದಿಂದ ರಸಮಂಜರಿ, ಚಿರಂತನ ತಂಡದಿಂದ ನೃತ್ಯ ರಂಜನೆ ನಡೆದವು.
ರಾಜ್ಯೋತ್ಸವದ ಸಂಭ್ರಮ ನಿರಂತರವಿರಲಿ
ಚಿತ್ರನಟ ಡಾಲಿ ಧನಂಜಯ್ ಮಾತನಾಡಿ ಕನ್ನಡ ಭಾಷೆಯ ಹಿಂದೆ ಸಾಮಾಜಿಕ ಕ್ರಾಂತಿ ಇದೆ. ಜನಸಾಮಾನ್ಯರಿಗೆ ಬೇಕಾದ ಒಳ್ಳೆಯ ವಿಷಯಗಳಿವೆ. ಹೀಗಾಗಿ ನೀವು ಮನಸ್ಸು ಮಾಡಿದರೆ ಕಾವ್ಯ ಬರೆಯಬಹುದು. ಅಥವಾ ಉತ್ತಮ ಕಾವ್ಯಗಳನ್ನು ಓದಿ ಆಸ್ವಾದಿಸಲೂ ಬಹುದು. ಈ ದಿಸೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ, ನವೆಂಬರ್‌ಗೆ ಸೀಮಿತವಾಗಬಾರದು. ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಸಿನಿಮಾ, ಸಾಹಿತ್ಯ ಹಾಗೂ ನಾಟಕ ಎಲ್ಲವನ್ನೂ ಸಂಭ್ರಮಿಸುವ ಜನರು ಇಲ್ಲಿದ್ದೀರಿ. ಹೀಗಾಗಿ ದಾವಣಗೆರೆ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ದಾವಣಗೆರೆಯಲ್ಲಿ ಉತ್ತಮ ಕಲೆಕ್ಷನ್ ಆದರೆ ಸಿನಿಮಾ ಸೂಪರ್‌ಹಿಟ್ ಆಗಿದೆ ಎಂದೇ ಅರ್ಥ ಎಂದ ಧನಂಜಯ್, ಚಿತ್ರದ ಸಂಭಾಷಣೆಯೊಂದನ್ನು ಹೇಳಿ ರಂಜಿಸಿದರು.
---