ಜಿಲ್ಲೆ

ಜಿಎಂ ವಿಶ್ವವಿದ್ಯಾಲಯ ಆವರಣದಲ್ಲಿ ಕನ್ನಡದ ತೇರು

ಡಿ. ಎಂ. ಮಹೇಶ್

ದಾವಣಗೆರೆ : ಅಲ್ಲಿ ಕನ್ನಡದ ತೇರೇ ಎಳೆದಂತಿತ್ತು. ಒಂದೇ ಸೂರಿನಡಿ ಇತಿಹಾಸ ಪುರುಷರು, ಚಿತ್ರನಟರು, ಹಿರಿಯ ಕವಿ-ಸಾಹಿತಿಗಳು, ಅರಸರು, ರಾಣಿಯರು, ಸಾಧಕರು ರಾಜಮಾರ್ಗದಲ್ಲಿ ಹಾದು ಹೋದರು. ಡೊಳ್ಳು, ಹುಲಿವೇಷ, ವೀರಗಾಸೆ, ಯಕ್ಷಗಾನ ಮೊದಲಾದ ಜಾನಪದ ಕಲಾ ತಂಡಗಳು ಸದ್ದು ಮಾಡಿದವು.  
ಮೈಸೂರು ಅರಮನೆ, ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷ ದೇಗುಲ ಇತರ ಪ್ರವಾಸಿ ತಾಣಗಳ ಸ್ತಬ್ಧಚಿತ್ರಗಳು ಕಣ್ಣಿಗೆ ರಾಚಿದವು. ಕೊಡಗು ಇತರೆ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಅನೇಕರು ಸಂಭ್ರಮಿಸಿದರು. ದಾವಣಗೆರೆಯ ಬೆಣ್ಣೆದೋಸೆ ಸೇರಿದಂತೆ ರಾಜ್ಯದ ವಿವಿಧ ತಿನಿಸುಗಳ ಘಮಲೂ ಕೂಡ ಹರಿದಾಡಿತ್ತು.
ನಗರದ ಜಿಎಂ ವಿಶ್ವವಿದ್ಯಾಲಯದ ಅಂಗಳದಲ್ಲಿ ಶನಿವಾರ ಕಂಗೊಳಿಸಿದ ನೋಟದ ಚಿತ್ರಣವಿದು. ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ಕಲಾವೈಭವಕ್ಕೆ ವಿವಿಯ ಸಾವಿರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಹಾಗೂ ಐತಿಹಾಸಿಕ ಲೋಕವನ್ನೇ ಮರು ಸೃಷ್ಟಿ ಮಾಡಿದ್ದರು.
ಮಯೂರ ವರ್ಮ, ಇಮ್ಮಡಿ ಪುಲಕೇಶಿ, ಶ್ರೀಕೃಷ್ಣ ದೇವರಾಯ, ಒನಕೆ ಓಬವ್ವ,  ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡ, ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್, ಬಸವಣ್ಣ, ಕುವೆಂಪು, ದ.ರಾ. ಬೇಂದ್ರೆ, ಸರ್.ಎಂ ವಿಶ್ವೇಶ್ವರಯ್ಯ, ಡಾ. ರಾಜಕುಮಾರ್, ಡಾ.ವಿಷ್ಣುವರ್ಧನ್, ಕಲ್ಪನಾ, ರಾಹುಲ್ ಡ್ರಾವಿಡ್, ಅಶ್ವಿನಿ ನಾಚಪ್ಪ, ಸುಧಾಮೂರ್ತಿ ಮೊದಲಾದವರ ವೇಷಗಳಲ್ಲಿ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಸುತ್ತಾಡಿದರು.
ಜೋಳದ ರೊಟ್ಟಿ, ಅಕ್ಕಿ ಹೋಳಿಗೆ, ಶೇಂಗಾ ಉಂಡೆ, ಕಜ್ಜಾಯ, ಕಡಬು, ಕಾಯಿ ಹೋಳಿಗೆ ಮೊದಲಾದ ಊಟದ ಸವಿ ಇತ್ತು. ದಸರಾ ಜಂಬೂ ಸವಾರಿ, ಕೋಟಿ ಲಿಂಗೇಶ್ವರ, ಮಲೆ ಮಾದೇಶ್ವರ ಸ್ವಾಮಿ ಜಾತ್ರೆ, ಚಾಮುಂಡಿ ಬೆಟ್ಟ, ಗೋಲಗುಂಬಜ್ ಮೊದಲಾದ ಸ್ತಬ್ಧಚಿತ್ರಗಳು ಕಣ್ಣಿಗೆ ಹಬ್ಬ ನೀಡಿದವು.
ನವ ದುರ್ಗೆಯರು, ಮಹಿಷಾಸುರನ ಸಂಹಾರ, ಭಕ್ತ ಪ್ರಹ್ಲಾದ ಮೊದಲಾ ಪೌರಾಣಿಕ ಸಂದರ್ಭಗಳು, ವೀರವನಿತೆಯರು, ಅಂಕೋಲದಲ್ಲಿ ನಡೆದ ಸ್ವಾತಂತ್ರ್ಯ ಯೋಧರ ಉಪ್ಪಿನ ಸತ್ಯಾಗ್ರಹ ಚಿತ್ರಣವನ್ನು ವಿದ್ಯಾರ್ಥಿಗಳು ಕಟ್ಟಿಕೊಟ್ಟರು. ಕಾರಿಡಾರಿನಲ್ಲಿ ನೋಡುತ್ತಿದ್ದವರು ಫೋಟೋ ಕ್ಲಿಕ್ಕಿಸಿದರೆ, ವೇಷಧಾರಿಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹಕುಲಪತಿ ಡಾ.ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಬಿ.ಎಸ್. ಸುನೀಲ್ ಕುಮಾರ್, ಜಿಎಂಐಟಿ ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ, ಜಿಎಂ ಹಾಲಮ್ಮ  ಕಾಲೇಜಿನ ಪ್ರಾಚಾರ್ಯೆ  ಡಾ. ಶ್ವೇತಾ ಮರೀಗೌಡರ್,  ಡಾ.ಎಚ್.ಎಸ್.ಕಿರಣ್‌ಕುಮಾರ್, ಎಂ. ಸಂತೋಷ ಕುಮಾರ್ ಇತರರಿದ್ದರು.
---