ಜಿಲ್ಲೆ

ಕಮಲ್ ಹೇಳಿಕೆ ಕನ್ನಡ ಘನತೆಗಿಲ್ಲ ತೊಂದರೆ : ಸತೀಶ್ ಜಾರಕಿಹೊಳಿ

ಡಿ. ಎಂ. ಮಹೇಶ್

ದಾವಣಗೆರೆ: ನಟ ಕಮಲ್‌ಹಾಸನ್ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ. ಕನ್ನಡಕ್ಕೆ ತನ್ನದೇ ಆದ ಪರಂಪರೆ ಇದೆ ಮತ್ತು ಹಳೆಯ ಭಾಷೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆತ ಹೇಳಿಕೆ ನೀಡಿದ ಮಾತ್ರಕ್ಕೆ ಕನ್ನಡ ಕೆಳಗಿಳಿಯುವುದಿಲ್ಲ. ಈ ವಿಚಾರದ ಬಗ್ಗೆ ಮಾತನಾಡಿ ಆತನನ್ನು ಎತ್ತರಕ್ಕೇರಿಸುವ ಕೆಲಸ ಆಗಬಾರದು ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಕೆ. ಹರಿಪ್ರಸಾದ್ ಮನೆಗೆ ತೆರಳಿದ್ದು ಚರ್ಚೆಯಾಗುವ ವಿಚಾರವಲ್ಲ. ನಮ್ಮ ಪಕ್ಷದ ಶಾಸಕರು, ಮುಖಂಡರ ಮನಗೆ ಸಿಎಂ ಹೋಗಿ ಬರುತ್ತಾರೆ. ಇದು ಸ್ವಾಭಾವಿಕ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ಕೋಮುಗಲಭೆ ಹಿಂದಿನ ಸರ್ಕಾರದಲ್ಲೂ ಆಗಿದೆ. ಈಗಿನ ಸರ್ಕಾರದಲ್ಲಿ ಕರಾವಳಿ ಭಾಗದಲ್ಲಿ ಮಾತ್ರವೇ ಆಗಿದೆ. ಅದನ್ನು ನಿಯಂತ್ರಣಕ್ಕೆ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಲಿದೆ ಎಂದು ಹೇಳಿದರು.

ಜಾತಿಗಣತಿ ವಿಚಾರದಲ್ಲಿ ನಾವು ಸಮ್ಮನಾಗಿಲ್ಲ. ಚರ್ಚೆ ಮಾಡುತ್ತಲಿದ್ದೇವೆ. ಸರಿಯಾದ ನಿರ್ಣಯವನ್ನೂ ತೆಗೆದುಕೊಳ್ಳುತ್ತೇವೆ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರ 43 ಕೇಸ್‌ಗಳನ್ನು ಹಿಂಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್, ಇದೇನೂ ಹೊಸದಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಕೇಸ್ ಹಿಂಪಡೆದಿದ್ದರು. ರೈತರು, ದಲಿತರು, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನೂ ಹಿಂಪಡೆದಿದ್ದೇವೆ. ಅದೇ ರೀತಿ ಇದೂ ಆಗಿರಬಹುದು. ಯಾವ ಕಾರಣಕ್ಕೆ ವಾಪಾಸ್ ಪಡೆಯಲಾಗಿದೆ ಎಂಬುದನ್ನು ಗಮನಿಸಲಾಗುವುದು ಎಂದು ತಿಳಿಸಿದರು.

-----