ದಾವಣಗೆರೆ: ನಗರದಲ್ಲಿ ನಡೆಯುತ್ತಿರುವ ರಾಜ್ಯದ ಸಿಬಿಎಸ್‌ಇ ಶಾಲೆಗಳ ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆಯ ಬಾಲಕರು ಮುನ್ನಡೆ ಸಾಧಿಸಿದ್ದಾರೆ.
ಡಾ. ಶಾಮನೂರು ಶಿವಶಂಕರಪ್ಪ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ಆವರಣದಲ್ಲಿ ಸೋಮವಾರದಿಂದ ಪಂದ್ಯಾವಳಿ ಆರಂಭವಾಗಿದೆ.
14 ವರ್ಷದೊಳಗಿನವರ ಬಾಲಕರ ವಿಭಾಗದ ಮೊದಲ ದಿನದ ಪಂದ್ಯಾಟದಲ್ಲಿ ಪಿಎಸ್‌ಎಸ್‌ಆರ್ ವಸತಿಯುತ ಶಾಲೆಯು ಬೆಂಗಳೂರಿನ ಗಂಗೋತ್ರಿ ಅಂತಾರಾಷ್ಟ್ರೀಯ ಶಾಲೆಯನ್ನು 60-37 ಅಂಕಗಳ ಅಂತರದಿಂದ ಮಣಿಸಿತು.
ನಂತರದ ಎರಡು ಪಂದ್ಯಗಳು ರೋಚಕತೆಗೆ ಸಾಕ್ಷಿಯಾದವು. ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ರಾಣೆಬೆನ್ನೂರಿನ ಕಣ್ಣೂರು ವಿದ್ಯಾನಿಕೇತನ ಶಾಲೆಯನ್ನು ಕೇವಲ ಒಂದು ಅಂಕದ ಅಂತರದಿಂದ (57-56) ಜಯ ಗಳಿಸಿದರು.
ಮೂರನೇ ಪಂದ್ಯಾಟದಲ್ಲಿ ಜಮಖಂಡಿಯ ರಾಯಲ್ ಪ್ಯಾಲೇಸ್ ಶಾಲೆಯ ಬಾಲಕರ ತಂಡವು ಬಾಗಲಕೋಟೆ ಜಿಲ್ಲೆಯ ತೇರದಾಳದ ಡಾ. ಸಿದ್ಧಾರ್ಥ ದೈನಗೊಂಡ ಶಾಲೆಯನ್ನು ಏಕೈಕ ಪಾಯಿಂಟ್ ಅಂತರದಿಂದ ಮಣಿಸಿ (45-44) ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
14, 17 ಹಾಗೂ 19 ವರ್ಷದೊಳಗಿನವರ ವಿಭಾಗಗಳಲ್ಲಿ ಟೂರ್ನಿ ನಡೆಯುತ್ತಿದೆ. ರಾಜ್ಯದ 198 ಶಾಲೆಗಳಿಂದ 1400 ಬಾಲಕರು, 600 ಬಾಲಕಿಯರು ಭಾಗವಹಿಸಿದ್ದಾರೆ. ಸೆ. 18ರವರೆಗೆ ಪಂದ್ಯಾವಳಿ ನಡೆಯಲಿದೆ.
---