ಜಿಲ್ಲೆ

ಧರ್ಮಶಾಸ್ತ್ರ ಹಲವು ಕಾನೂನುಗಳ ತಾಯಿ

ರಮೇಶ ಜಹಗೀರದಾರ್

ದಾವಣಗೆರೆ  ಧರ್ಮಶಾಸ್ತ್ರ ಅನೇಕ ಕಾನೂನುಗಳ ತಾಯಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದರು.  ಇಲ್ಲಿನ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕಾನೂನು ಮತ್ತು ಧರ್ಮ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಭರತ ಖಂಡದಲ್ಲಿ ಕಾನೂನು ಹಾಗೂ ಧರ್ಮ ಶಾಸ್ತ್ರಗಳು ಜತೆ ಜತೆಗೆ ಸಾಗಿ ಬಂದಿವೆ. ಧರ್ಮಶಾಸ್ತ್ರದಲ್ಲಿ ಕಳವು, ಲಂಚ, ಗರ್ಭಪಾತದ ಬಗ್ಗೆಯೂ ಉಲ್ಲೇಖವಿತ್ತು. ಧರ್ಮಶಾಸ್ತ್ರವೂ ಕಾನೂನಿನ ಒಂದು ಮುಖ್ಯ ಮೂಲವಾಗಿದೆ ಎಂದು ತಿಳಿಸಿದರು.  ಮಕ್ಕಳನ್ನು ತಂದೆ, ಪತ್ನಿಯನ್ನು ಗಂಡ ನೋಡಿಕೊಳ್ಳಬೇಕು. ಮುಪ್ಪಿನಲ್ಲಿ ಪಾಲಕರನ್ನು ಮಗ ನೋಡಿಕೊಳ್ಳಬೇಕು. ಎಲ್ಲರೊಂದಿಗೆ ಪ್ರೀತಿಯಿಂದ ಇರಬೇಕು ಎಂಬ ಬಗ್ಗೆ ಧರ್ಮಗಳು ತಿಳಿಸಿವೆ. ಇಂದಿನ ಕಾನೂನುಗಳೂ ಇದನ್ನೇ ಸಾರುತ್ತಿವೆ. ಇಂದಿನ ಬದುಕಿಗೆ ಅಗತ್ಯವಾದ ತತ್ವಗಳು ರಾಮಾಯಣದಲ್ಲಿವೆ ಎಂದರು.  ಕಾನೂನಿನಲ್ಲಿ ಉತ್ತರ ಸಿಗದ ಪ್ರಶ್ನೆಗಳಿಗೆ ಧರ್ಮಶಾಸ್ತ್ರದಲ್ಲಿ ಉತ್ತರ ಹುಡುಕಬಹುದು. ಕಾನೂನಿನ ಮೂಲ ಬೇರೆ, ಕಾನೂನು ಬೇರೆ. ಈ ಬಗ್ಗೆ ಸ್ಪಷ್ಟತೆ ಇರಬೇಕು. ಕಾನೂನು ಒಂದು ಜೈವಿಕ ನದಿ ಇದ್ದಂತೆ. ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಸಿಂಹಾಸನದಿಂದ, ಸಮಾಜದಿಂದ, ಜನರ ಅಭಿಪ್ರಾಯದಿಂದಲೂ ಕಾನೂನು ಹುಟ್ಟುತ್ತದೆ. ಕೆಲವೊಮ್ಮೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡಾ ತಮ್ಮ ಆದೇಶಗಳ ಮೂಲಕ ಶಾಸನವನ್ನು ರಚಿಸುತ್ತವೆ ಎಂದು ಹೇಳಿದರು.  ಹೆಣ್ಣು ಮಕ್ಕಳಿಗೆ ಗೌರವ ಕೊಡುವುದರೊಂದಿಗೆ ಆಸ್ತಿಯನ್ನೂ ನೀಡಬೇಕಿದೆ. ಸ್ತ್ರೀಯರನ್ನು ಗೌರವಿಸುವ ಬಗ್ಗೆ ಧರ್ಮಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಧರ್ಮವನ್ನು ಟೀಕಿಸುವುದು ಕೆಲವರಿಗೆ ಫ್ಯಾಷನ್ ಆಗಿದೆ ಎಂದು ಸಂವಾದದಲ್ಲಿ ಎದುರಾದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.  ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ಹೈಕೋರ್ಟ್‌ನ ವಕೀಲ ಎಂ.ಆರ್. ಹಿರೇಮಠದ್, ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಯತೀಶ್ ಇದ್ದರು.