ದಾವಣಗೆರೆ: ಹರಿಹರದ ತಾಲೂಕು ಕ್ರೀಡಾಂಗಣದ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆಗೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಹರಿಹರದ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹರಿಹರ ಗಾಂಧಿ ಮೈದಾನದ ಆವರಣದಲ್ಲಿ ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಅಡಿಯ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿದೆದಾರರ ಕಾಲಾವಧಿ 2019ಕ್ಕೆ ಅಂತ್ಯಗೊಂಡಿದೆ. ಮರು ಹರಾಜಿಗೆ ಒತ್ತಾಯಿಸಿ ವಿವಿಧ ಹಂತದ ಹೋರಾಟ ನಡೆಸಿದ್ದರೂ ಕ್ರಮವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಈ ವಾಣಿಜ್ಯ ಸಂಕೀರ್ಣದಲ್ಲಿ ನೆಲ ಹಾಗೂ ಮಹಡಿಯಲ್ಲಿ ಒಟ್ಟು 42 ಮಳಿಗೆಗಳಿವೆ. 22 ವರ್ಷದ ಹಿಂದೆ ಹರಾಜು ಪ್ರಕ್ರಿಯೆ ನಡೆಸಲಾಗಿ 2 ಸಾವಿರ ದಿಂದ 2500 ರೂ. ಬಾಡಿಗೆ ದರದಲ್ಲಿ ಮಳಿಗೆಗಳನ್ನು ನೀಡಲಾಗಿತ್ತು. ಇದರಲ್ಲಿ ಬಹುತೇಕರು ಸಬ್‌ಲೀಸ್ ಹೆಸರಲ್ಲಿ ಇತರರಿಗೆ 15 ಸಾವಿರ ರೂ.ನಿಂದ 20 ಸಾವಿರ ರೂ.ವರೆಗೆ ಬಾಡಿಗೆ ನೀಡುತ್ತಿದ್ದಾರೆ.
2019ಕ್ಕೆ ಹರಾಜು ಅವಧಿ ಪೂರ್ಣಗೊಂಡಿದೆ. ನ್ಯಾಯಯುತ ಟೆಂಡರ್ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ಅದರಂತೆ ಕ್ರಮ ವಹಿಸಲಾಗಿಲ್ಲ. ಈ ಸಂಬಂಧ ಹರಿಹರ ಗಾಂಧಿ ಮೈದಾನದಲ್ಲಿ 46 ದಿನದ ಧರಣಿ ನಡೆಸಲಾಗಿದೆ. ಜಿಲ್ಲಾಡಳಿತಕ್ಕೆ ಎರಡು ಬಾರಿ ಮನವಿ ನೀಡಿ ತಿಂಗಳಾದರೂ ಕ್ರಮವಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸಂಘಟನೆ ತಾಲೂಕು ಅಧ್ಯಕ್ಷ ಎಸ್. ಗೋವಿಂದ್ ತಿಳಿಸಿದರು.
ಸಬ್‌ಲೀಸ್ ಪಡೆದ ಕೆಲ ಮಳಿಗೆದಾರರು ಕೋರ್ಟ್‌ಗೆ ಹೋಗಿದ್ದಾರೆ ಎಂಬ ನೆಪದಲ್ಲಿ ಅಧಿಕಾರಿಗಳು ಈ ವಿಚಾರದಲ್ಲಿ ಕ್ರಮ ವಹಿಸುತ್ತಿಲ್ಲ. ಇದನ್ನು ಮರು ಹರಾಜು ಕರೆದಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಆಸರೆಯಾಗಲಿದೆ. ಕೂಡಲೆ ಹರಾಜು ಪ್ರಕ್ರಿಯೆಗೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಈಗಿರುವ ಮಳಿಗೆಗಳಲ್ಲಿ ಯಾವುದೇ ಬಾರ್, ಚಿಕನ್-ಮಟನ್ ಅಂಗಡಿಗಳಿಗೆ ಅವಕಾಶ ನೀಡದಂತೆ ನಿಯಮವಿದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಕೆಲವರು ಅನಧಿಕೃತವಾಗಿ ಗೋದಾಮು ಮಾಡಿಕೊಂಡಿದ್ದಾರೆ. ಇದನ್ನು ತೆರವು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಕ್ರೀಡಾ ಇಲಾಖೆ ಅಧಿಕಾರಿ ರೇಖಾ ಇನ್ನಷ್ಟು ಸಮಯಾವಕಾಶ ಕೇಳಿದಾಗ, ಈ ಹಿಂದೆಯೂ ಕಾಲಾವಕಾಶ ನೀಡಿದ್ದೇವೆ. ಮತ್ತೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು. ನಮಗೆ ಸೂಕ್ತ ಉತ್ತರ ಬಾರದಿದ್ದಲ್ಲಿ ಬೆಂಗಳೂರಲ್ಲಿನ ಕ್ರೀಡಾ ಇಲಾಖೆ ಯುಕ್ತರ ಕಚೇರಿ ಎದುರೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷ ಎಂ.ಆರ್ ಆನಂದ್, ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್, ಸಹ ಕಾರ್ಯದರ್ಶಿ ಭರತ್, ಸಂಘಟನಾ ಕಾರ್ಯದರ್ಶಿ ಎಂ. ಮಧು, ಸೀತಾರಾಂ ರೆಡ್ಡಿ, ಶಬ್ಬೀರ್ ಇತರರಿದ್ದರು.