ದಾವಣಗೆರೆ: ಜಲಜೀವನ ಮಿಷನ್ ಯೋಜನೆ(ಮನೆ ಮನೆಗೆ ಗಂಗೆ) ಅನುಷ್ಠಾನ ಮತ್ತು ಕುಡಿವ ನೀರಿನ ಸುಸ್ಥಿತಿ ಕಾಪಾಡುವಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವ ದಾವಣಗೆರೆ ಜಿಲ್ಲೆಯಿಂದ ಇದೇ ಸ್ತಬ್ಧಚಿತ್ರದ ಮಾದರಿ ಈ ಬಾರಿಯ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ನೀರೊದಗಿಸುವ ಯೋಜನೆಯಡಿ ವರ್ಷಾಂತ್ಯಕ್ಕೆ ಜಿಲ್ಲೆಯ 100 ಗ್ರಾಮಕ್ಕೆ ಗಂಗೆ ಪೂರೈಸಲು ಉದ್ದೇಶಿಸಲಾಗಿದೆ. ಈಗಾಗಲೆ 51 ಗ್ರಾಮಗಳನ್ನು 24-7 ನಿರಂತರ ನೀರು ಸರಬರಾಜು ಗ್ರಾಮಗಳಾಗಿ ಘೋಷಣೆ ಮಾಡುವುದರೊಂದಿಗೆ ಯೋಜನೆ ಜಾರಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದ್ದಾರೆ.
ಬ್ಯೂರೋ ಆಫ್ ಇಂಡಿಯಾ ಸ್ಟಾೃಂಡರ್ಸ್‌ನನ್ವಯ ನೀರಿನ ಗುಣಮಟ್ಟ ಕಾಯ್ದಕೊಂಡು ಗ್ರಾಮೀಣ ಪ್ರದೇಶದ ಮನೆಗಳಿಗೆ ಸಮರ್ಪಕವಾಗಿ ಪೂರೈಸುವುದು, ಮಳೆಗಾಲಕ್ಕೂ ಮುನ್ನ ಮತ್ತು ನಂತರ ನೀರಿನ ಜಲಮೂಲಗಳು, ಕೊನೆ ಮನೆಯ ನಳಗಳ ಮಾದರಿ ಸಂಗ್ರಹಿಸಿ ಇಲಾಖೆ ಪ್ರಯೋಗಾಲಯದಲ್ಲಿ ರಾಸಾಯನಿಕ ಮತ್ತು ಸೂಕ್ಷ್ಮಾಣು ಜೀವಿಗಳ ಪರೀಕ್ಷೆ ಕೈಗೊಳ್ಳುವುದು.
ಪ್ರತಿ ತಿಂಗಳು ಎಫ್‌ಟಿಕೆ ಮುಖಾಂತರ ಗುಣಮಟ್ಟ ಪರೀಕ್ಷಿಸುವುದು, ನೀರು ಸರಬರಾಜು ಅಡಚಣೆ ಆಗದಂತೆ ಕ್ರಮ ವಹಿಸುವುದು. ಅರ್ಜಿ ಸಲ್ಲಿಸಿದ ಎರಡು ದಿನದಲ್ಲಿ ಹೊಸ ಸಂಪರ್ಕ ಕಲ್ಪಿಸುವುದು, ಸ್ವ-ಸಹಾಯ ಸಂಘ, ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರನ್ನು ಒಳಗೊಂಡು ಸಾರ್ವಜನಿಕರಿಗೆ ನೀರಿನ ಸದ್ಬಳಕೆ, ಕುಂದುಕೊರತೆ ಸಹಾಯವಾಣಿ ಮತ್ತು ಕಂದಾಯ ವಸೂಲಾತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸ್ಮಾರ್ಟ್‌ಮೀಟರ್ ಅಳವಡಿಸಿ ಮಿತ ಬಳಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿದೆ ಇದು ದೇಶದಲ್ಲೇ ಮಾದರಿ ಜಿಲ್ಲೆಯಾಗಿದೆ.
ಆಯ್ಕೆ ಸಮಿತಿ ಅನುಮೋದಿಸಿದಂತೆ ದಸರಾ ಮೆರವಣಿಗೆಯಲ್ಲಿ ಇದೇ ವಿಷಯಾಧಾರಿತ ಸ್ತಬ್ಧಚಿತ್ರ ಪ್ರದರ್ಶಿತವಾಗಲಿದೆ. ಬೆಂಗಳೂರಿನ ಕಲಾವಿದ ರಂಗನಾಥ್ ಸೇರಿ 10 ಜನರ ತಂಡವು ಫ್ಲೈವುಡ್ ಇತರೆ ವಸ್ತುಗಳನ್ನು ಬಳಸಿ ಸ್ತಬ್ಧಚಿತ್ರದ ಮಾದರಿ ತಯಾರಿಸಿದ್ದು ಅಂತಿಮ ಹಂತದ ಟಚಪ್ ನಡೆದಿದೆ. ಸುಮಾರು 10 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಸ್ತಬ್ಧಚಿತ್ರದ ನೋಡಲ್ ಅಧಿಕಾರಿಯೂ ಆಗಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ್ ತಿಳಿಸಿದ್ದಾರೆ.