ದಾವಣಗೆರೆ: ಅಪ್ರಾಪ್ತಳನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಸಜೆ ಹಾಗೂ 35 ಸಾವಿರ ರೂ. ದಂಡ ವಿಧಿಸಿದೆ.
ಆಟೋ ಚಾಲಕ ವಸಂತ ನವೇರ ಶಿಕ್ಷೆಗೆ ಗುರಿಯಾದ ಅಪರಾಧಿ. ಅಪ್ರಾಪ್ತ ಬಾಲಕಿಯನ್ನು ಅರಳಿಹಳ್ಳಿ ಗ್ರಾಮದ ರಘು ಪೂಜಾರ್ ಎಂಬಾತ ಪ್ರೀತಿಸಿ ಕರೆದುಕೊಂಡು ಹೋಗಿದ್ದರ ಸಂಬಂಧ ಕುಮಾರಪಟ್ಟಣಂ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ.
ಇದೇ ವಿಚಾರಕ್ಕೆ ಮನನೊಂದ ಪಾಲಕರು ಬಾಲಕಿಯ ವಿದ್ಯಾಭ್ಯಾಸಕ್ಕೆಂದು ಪರಿಚಯಸ್ಥರ ಮನೆಯಲ್ಲಿ ಬಿಟ್ಟಿದ್ದರು. 2023ರ ಆ.13ರಂದು ಬಾಲಕಿ ನಾಪತ್ತೆಯಾಗಿದ್ದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಡಿಗೆ ಆಟೋ ಓಡಿಸುತ್ತಿದ್ದ ವಸಂತ್, ಬಾಲಕಿಯನ್ನು ಪರಿಚಯಿಸಿಕೊಂಡು ಚಿತ್ರದುರ್ಗ ಜಿಲ್ಲೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ನೂರ್ ಅಹಮ್ಮದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು ಶುಕ್ರವಾರ ಶಿಕ್ಷೆ ವಿಧಿಸಿದರು. ಸರ್ಕಾರಿ ವಕೀಲ ಎ.ಎಂ. ಬಸವರಾಜ್ ವಕಾಲತ್ತು ನಡೆಸಿದರು.