ಜಿಲ್ಲೆ

ಪತ್ನಿ ಹತ್ಯೆಗೆ ಯತ್ನಿಸಿದವನಿಗೆ ಜೈಲು

ಡಿ. ಎಂ. ಮಹೇಶ್

ದಾವಣಗೆರೆ: ಚಾಕುವಿನಿಂದ ಇರಿದು ಪತ್ನಿಯ ಹತ್ಯೆಗೆ ಯತ್ನಿಸಿದ್ದ ಅಪರಾಧಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಾರಾಗೃಹ ಸಜೆ ಹಾಗೂ 24 ಸಾವಿರ ರೂ. ದಂಡ ವಿಧಿಸಿದೆ.

ಚಿತ್ರದುರ್ಗ ನಿವಾಸಿ ಸಲೀಂ ಶಿಕ್ಷೆಗೆ ಗುರಿಯಾದ ಅಪರಾಧಿ. 18 ವರ್ಷದ ಹಿಂದೆ ಚನ್ನಗಿರಿ ನಿವಾಸಿ ಆಸ್ಮಾಖಾನಂ ಅವರನ್ನು ಮದುವೆಯಾಗಿದ್ದ ಸಲೀಂ, ನಿತ್ಯವೂ ಪಾನಮತ್ತನಾಗಿ ಮನೆಗೆ ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ.

ಗಲಾಟೆ ಬಿಡಿಸಲು ಹೋಗಿದ್ದ, ಆಸ್ಮಾಖಾನಂ ಅವರ ತಮ್ಮ ಗೌಸ್‌ಖಾನ್ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಸಲೀಂ ವಿರುದ್ಧ ಚನ್ನಗಿರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ತನ್ನನ್ನು ಪ್ರಕರಣದಿಂದ ಮುಕ್ತಗೊಳಿಸುವಂತೆ ಹೇಳಿ ಪತ್ನಿಗೆ ಕರೆ ಮಾಡಿ ಬೆದರಿಸುತ್ತಿದ್ದ.

ಹೀಗಾಗಿ ಚನ್ನಗಿರಿಯ ತವರುಮನೆಗೆ ಪತ್ನಿ ವಾಪಸಾಗಿದ್ದರು. 2024ರ ಏ. 11ರಂದು ಮನೆ ನುಗ್ಗಿ ಪತ್ನಿಯನ್ನು ಚಾಕುವಿನಿಂದ ಬರ್ಬರವಾಗಿ ಇರಿದಿದ್ದು ಆಸ್ಮಾಖಾನಂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಸಂಬಂಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖಾಧಿಕಾರಿ ಪಿಎಸ್‌ಐ ಮಹಮ್ಮದ್ ಸೈಫುದ್ದೀನ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್ ಸೋಮವಾರ ಶಿಕ್ಷೆ ಪ್ರಕಟಿಸಿದರು. ಸರ್ಕಾರಿ ವಕೀಲ ಕೆ.ಎಸ್. ಸತೀಶ್ ವಕಾಲತ್ತು ನಡೆಸಿದ್ದರು.