ದಾವಣಗೆರೆ: ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಕಾಣಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಸಲಹೆ ನೀಡಿದರು.
ತಾಲೂಕಿನ ಮಾಯಕೊಂಡ ಗ್ರಾಮದ ಪ್ರಗತಿಪರ ರೈತ ಸಾಹುಕಾರ ಮುರುಗೇಶ್ ಜಮೀನಿನಲ್ಲಿ ಶುಕ್ರವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಮೆಕ್ಕೆಜೋಳ, ಅಡಕೆಯನ್ನಷ್ಟೇ ಬೆಳೆಯದೆ ಅಕ್ಕಡಿ ಬೆಳೆಯಾಗಿ ತೊಗರಿ, ಅವರೆ ಬೆಳೆ ಹಾಕಿದಲ್ಲಿ ಭೂಮಿಗೆ ಫಲವತ್ತತೆ ತಂದು ಕೊಡುವುದರೊಂದಿಗೆ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿದರು.
ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 2500 ಹೆ. ಪ್ರದೇಶದಲ್ಲಿದ್ದ ತೊಗರಿ ಇಂದು 9565 ಹೆ. ಗೆ ವಿಸ್ತರಣೆಯಾಗಿದೆ. 1650 ಹೆ. ಪ್ರದೇಶದಲ್ಲಿ ಅಲಸಂದೆ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಬೆಲೆ ಪ್ರತಿ ಕೆಜಿಗೆ 200ರ ಗಡಿಯಂಚಿಗೆ ಬಂದು ನಿಂತಿದೆ. ಆದ್ದರಿಂದ ತೊಗರಿ ಬೆಳೆಯನ್ನು ಕಡ್ಡಾಯವಾಗಿ ಬೆಳೆದಲ್ಲಿ ಮಾತ್ರ ಅನುಕೂಲವಾಗುತ್ತದೆ ಎಂದರು.
ರೊಟ್ಟಿ, ಬಿಸ್ಕತ್ತು, ರಾಗಿ ಹಿಟ್ಟು ಹಾಗೂ ಇತರೆ ಆಹಾರ ಪದಾರ್ಥಗಳನ್ನು ತಯಾರಿಸುವ ಘಟಕಗಳಿಗೆ 15 ಲಕ್ಷ ರೂ.ಗಳವಗೆ ಕೃಷಿ ಇಲಾಖೆಯಿಂದ ಸಾಲ ಸೌಲಭ್ಯ ನೀಡಲಾಗಿದೆ. ಇದುವೆಗೆ ಜಿಲ್ಲಾದ್ಯಂತ 150 ಯುವಕರಿಗೆ 10 ಕೋಟಿ ರೂ. ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಎಡಿಎ ಡಿ.ಎಂ.ಶ್ರೀಧರಮೂರ್ತಿ ಮಾತನಾಡಿ ರೈತರು ತೊಗರಿ, ಅವರೆ, ಅಲಸಂದಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ರೈತ ಸಾಹುಕಾರ ಮುರುಗೇಶ್ ಮಾತನಾಡಿ 25 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದು, ಪ್ರತಿ ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ನಿರೀಕ್ಷೆ ಇದೆ ಎಂದರು.
ಹುಚ್ಚವ್ವನಹಳ್ಳಿ ರೈತ ಮಹಿಳೆ ಮೀನಾಕ್ಷಮ್ಮ ಅವರಿಗೆ ತಾಲೂಕು ಕೃಷಿ ಪಂಡಿತ ಪ್ರಶಸ್ತಿ, ಮಾಯಕೊಂಡ ಲಕ್ಷ್ಮಣ್ ಅವರಿಗೆ ಉತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೆದ್ನೆ ಗ್ರಾಮದ ರೈತ ಮುರುಗೇಂದ್ರಪ್ಪ, ಮಾಯಕೊಂಡ ಗ್ರಾಪಂ ಅಧ್ಯಕ್ಷೆ ಲತಾ ಮಲ್ಲಿಕಾರ್ಜುನ್, ಸದಸ್ಯ ಲಕ್ಷ್ಮಣ ಮಾತನಾಡಿದರು.
ಡಿಡಿಎ ಅಶೋಕ್, ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕ ಎಸ್.ಜಿ.ರುದ್ರೇಶ್, ಚನ್ನಬಸಮ್ಮ, ಕೃಷಿ ಅಧಿಕಾರಿ ಬೀರಪ್ಪ ಇತರರಿದ್ದರು.
---