ಜಿಲ್ಲೆ

ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಶಿಲಾಶಾಸನ ಪತ್ತೆ

ಡಿ. ಎಂ. ಮಹೇಶ್

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ. 5 ಅಡಿ ಉದ್ದದ ಈ ಶಾಸನವು ಹಳಗನ್ನಡದ 17 ಸಾಲುಗಳನ್ನು ಒಳಗೊಂಡಿದೆ.

ಮಾದಾಪುರ ಕೆರೆಯಲ್ಲಿ ಸ್ಥಳೀಯರು ಜೆಸಿಬಿಯಿಂದ ಮಣ್ಣನ್ನು ತೆಗೆಯುವಾಗ ಶಿಲಾಶಾಸನ ಪತ್ತೆಯಾಗಿದೆ. ಇದು ಕ್ರಿ.ಶ. ಏಳನೇ ಶತಮಾನದ, ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ (ಕ್ರಿ.ಶ.654-681) ಕಾಲದ ಶಾಸನವಾಗಿದೆ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್. ಶೇಜೇಶ್ವರ ತಿಳಿಸಿದ್ದಾರೆ.

ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುವಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು ಹಾಗೂ ಕೆರೆಯನ್ನು ನಿರ್ಮಿಸಿದ ಓಜರಿಗೆ ಭೂಮಿಯನ್ನು ದಾನ ನೀಡಿರುವುದನ್ನು ಹಾಗೂ ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತೆಂದು ಉಲ್ಲೇಖಿಸಲಾಗಿದೆ.

ಈ ಶಾಸನ ಶೋಧನೆಯಿಂದ ಬಳ್ಳಾವಿ ಎಪ್ಪತ್ತು ಎಂಬ 70 ಗ್ರಾಮಗಳಿದ್ದ ಆಡಳಿತ ವಿಭಾಗದ ಪ್ರಾಚೀನತೆ ಹಾಗೂ ಶಾಸನವು 1344 ವರ್ಷಗಳ ಪುರಾತನವಾದುದು ಎಂದು ತಿಳಿಸುತ್ತದೆ. ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ.17 ನೇ ಶತಮಾನದಲ್ಲಿನ ಅಪೂರ್ಣ ಉಬ್ಬು ಶಿಲ್ಪವಿದೆ.

ಈ ಶಾಸನ ಓದಿಕೊಟ್ಟ ಪ್ರೊ.ಶ್ರೀನಿವಾಸ ಪಾಡಿಗರ, ರಮೇಶ ಹಿರೇಜಂಬೂರು, ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಡಾ.ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಿಗುಂಡಿ, ಮಾದಾಪುರ ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ, ಗ್ರಾಮಸ್ಥರಾದ ಬುಜಂಗ, ವೀರೇಶ್ ಹಾಗೂ ಇತರರ ಕಾರ್ಯಕ್ಕೆ ಪುರಾತತ್ವ ಇಲಾಖೆ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.