ದಾವಣಗೆರೆ: ಒಟ್ಟು 432 ಕೋಟಿ ರೂ. ವೆಚ್ಚದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನು ಶೀಘ್ರವೇ ಚಾಲನೆಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈ ಯೋಜನೆಯಡಿ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕಿನ 96 ಗ್ರಾಮಗಳ 102 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದರು.
ವಿವಿಧ ಏತ ನೀರಾವರಿ ಯೋಜನೆಗಳಡಿ ಮಳೆಗಾಲದಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಭರ್ತಿ ಮಾಡಿ, ಅಂತರ್ಜಲ ಮಟ್ಟ ಹೆಚ್ಚಿಸಿ ರೈತರ ಬದುಕು ಹಸನುಗೊಳಿಸುವ ಉದ್ದೇಶವಿದೆ. ಹರಿಹರ ತಾಲೂಕಿನ ದೀಟೂರಿನಿಂದ ಜಗಳೂರಿನ 51 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಹೊನ್ನಾಳಿ ತಾಲೂಕಿನ 23, ಹರಿಹರದ 1 ಕೆರೆ ತುಂಬಿಸುವ 52 ಕೋಟಿ ರೂ. ವೆಚ್ಚದ ಬೆನಕನಹಳ್ಳಿ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಹನುಮಸಾಗರ ಯೋಜನೆಯಡಿ ನೂರು ಕೋಟಿ ರೂ. ವೆಚ್ಚದಲ್ಲಿ ಹೊನ್ನಾಳಿ-ನ್ಯಾಮತಿ ತಾಲೂಕಿನ 26 ಕೆರೆಗಳಿಗೆ ನೀರು ತುಂಬಿಸಲು ಕಾಮಗಾರಿ ಶುರುವಾಗಿದೆ ಎಂದು ವಿವರಿಸಿದರು.
ಜಿಲ್ಲೆಯ ಪ್ರಗತಿಗೆ ಸಂಕಲ್ಪ
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಜನಪರ ಯೋಜನೆಗಳ ಸಮರ್ಪಕ ಜಾರಿಗೆ ಶ್ರಮಿಸುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವು ಕಂಕಣಬದ್ಧರಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಇದೇ ವೇಳೆ ಸಚಿವರು ಹೇಳಿದರು.
ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದಲ್ಲಿ 4.35 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣದ 118.14 ಕೋಟಿ ರೂ. ಮೊತ್ತ ಕೆಎಸ್‌ಆರ್‌ಟಿಸಿಗೆ ಪಾವತಿಯಾಗಿದೆ. ಅನ್ನಭಾಗ್ಯದಲ್ಲಿ ಇದುವರೆಗೆ 228 ಕೋಟಿ ರೂ. ಸಂದಾಯವಾಗಿದೆ. ಗೃಹಜ್ಯೋತಿಯಲ್ಲಿ 4.27 ಲಕ್ಷ ಫಲಾನುಭವಿಗಳಿಗೆ 282 ಕೋಟಿ ರೂ. ವ್ಯಯಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 3.55 ಲಕ್ಷ ಕುಟುಂಬಕ್ಕೆ 662 ಕೋಟಿ ರೂ. ಜಮೆಯಾಗಿದೆ. ಯುವನಿಧಿ ಯೋಜನೆಯಲ್ಲಿ 9035 ಯುವಕ ಯುವತಿಯರಿಗೆ 2.70 ಕೋಟಿ ರೂ. ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.39ರಷ್ಟು ಹೆಚ್ಚಿನ ಮಳೆಯಾಗಿದ್ದು ಪ್ರಸಕ್ತ ಮುಂಗಾರು ಆಶಾದಾಯಕವಾಗಿದೆ. ಶೇ.80ರಷ್ಟು ಬಿತ್ತನೆಯಾಗಿದ್ದು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಉಪ ಖನಿಜ ರಿಯಾಯಿತಿ ನಿಯಮಗಳನ್ನು ಮತ್ತಷ್ಟು ಸರಳೀಕರಿಸಿ, ಸುಲಭವಾಗಿ ಜನರಿಗೆ ಮರಳು ಮತ್ತು ಎಂ-ಸ್ಯಾಂಡ್ ದೊರಕಿಸಲು ಕ್ರಮವಹಿಸಲಾಗಿದೆ. ನರೇಗಾದಡಿ 13.32 ಲಕ್ಷ ಮಾನವ ದಿನ ಸೃಜಿಸಿ 46,220 ಕುಟುಂಬಗಳಿಗೆ ಕೆಲಸ ನೀಡಿ 44.85 ಕೋಟಿ ರೂ. ನೀಡಲಾಗಿದೆ. ನಾಲಾ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ.
ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 200 ಕೋಟಿ ರೂ. ಮತ್ತು ನಗರೋತ್ಥಾನ 4 ರಲ್ಲಿ 59.50 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಂಡು ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ.
ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿನಗರದಲ್ಲಿ 10 ಉದ್ಯಾನವನ ನಿರ್ಮಿಸಲಾಗುತ್ತಿದೆ. ಚಿಗಟೇರಿ ಜಿಲ್ಲಾಸ್ಪತ್ರೆಯ ದುರಸ್ತಿ ಮತ್ತು ಹಂತ ಹಂತವಾಗಿ ಹೊಸ ಬ್ಲಾಕ್‌ಗಳ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೆ ಆರೋಗ್ಯ ಸಚಿವರ ಜತೆ ಚರ್ಚಿಸಲಾಗಿದೆ. ಡೆಂೆ ಜ್ವರ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿ ವಾರ್ ರೂಂ ತೆರೆದು ಡೆಂೆ ಜ್ವರ ಹರಡದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಮೇಯರ್ ಬಿ.ಎಚ್. ವಿನಾಯಕ, ಡಿಐಜಿ ಬಿ. ರಮೇಶ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಉಮಾಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಪಾಲಿಕೆ ಸದಸ್ಯರು, ಅಧಿಕಾರಿಗಳಿದ್ದರು