ಜಿಲ್ಲೆ

ಇಂಗ್ಲಿಷ್ ವ್ಯಾಮೋಹಕ್ಕೆ ಹೆಚ್ಚಿದ ವೃದ್ಧಾಶ್ರಮಗಳು   ಸಾಹಿತಿ ಕುಂ.ವೀರಭದ್ರಪ್ಪ ಆತಂಕ

ಡಿ. ಎಂ. ಮಹೇಶ್

ದಾವಣಗೆರೆ: ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಿವೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ ನಗರಪಾಲಿಕೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಹನ್ನೊಂದು ವರ್ಷದ ಹಿಂದೆ ಸುಮಾರು 800 ವೃದ್ಧಾಶ್ರಮಗಳಿದ್ದವು. ಅವೀಗ 28 ಸಾವಿರಕ್ಕೆ ಏರಿಕೆಯಾಗಿವೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ್ದರ ಪರಿಣಾಮ ಬಹುಪಾಲು ಮಕ್ಕಳು ವಿದೇಶದಲ್ಲಿದ್ದರೆ, ಪಾಲಕರು ವೃದ್ಧಾಶ್ರಮದ ಪಾಲಾಗಿದ್ದಾರೆ ಎಂದು ವಿಷಾದಿಸಿದರು.
ಜಾಗತೀಕರಣ ಪ್ರಭಾವದಿಂದ ತೃತೀಯ ಜಗತ್ತಿನ 500 ಭಾಷೆಗಳಿಗೆ ಕಂಟಕವಿದೆ ಎಂದು ಭಾಷಾ ತಜ್ಞರು ಹೇಳಿದ್ದು ಸುಳ್ಳಾಗಿದೆ. ಕನ್ನಡಕ್ಕೆ ತಾಳಿಕೆಯ ಶಕ್ತಿ ಇದೆ. ಸಾವಿರಾರು ವರ್ಷಗಳು ಉರುಳಿದರೂ ಕನ್ನಡಕ್ಕೆ ಸಾವಿಲ್ಲ. ಮನೆಗಳಲ್ಲಿ ಕನ್ನಡ ಮಾತನಾಡುವ ವಾತಾವರಣ ಬೆಳೆಸಬೇಕು. ಅದಕ್ಕೆ ದೇವರಮನೆ, ಅಡುಗೆ ಮನೆಯ ಸ್ಥಾನ ನೀಡಬೇಕು ಎಂದು ಸಲಹೆ ನೀಡಿದರು.
ಬಹುತೇಕ ಮುಖ್ಯಮಂತ್ರಿಗಳು ಕನ್ನಡ ಮಾಧ್ಯಮದಲ್ಲೇ ಓದಿದ್ದಾರೆ. ಇದು ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಆಗಿದೆ. ಹೀಗಾಗಿ ಕನ್ನಡಕ್ಕೆ ಅನ್ನ ಕೊಡುವ ಶಕ್ತಿ ಇಲ್ಲ ಎಂಬ ಮಾತು ಹುಸಿಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು ನಿಮ್ಮ ಮಕ್ಕಳನ್ನು ಯಾವುದೇ ಶಾಲೆಯಲ್ಲಿ ಓದಿಸಿ, ಆದರೆ ಮನೆಗಳಲ್ಲಿ ವಚನ, ಕೀರ್ತನೆ, ತ್ರಿಪದಿಗಳ ಮೂಲಕ ಕನ್ನಡದ ಪದಗಳ ಬಗ್ಗೆ ತಿಳಿಸಿಕೊಡುವ ಜವಾಬ್ದಾರಿ ನಿಭಾಯಿಸಿ ಎಂದು ಸಲಹೆ ನೀಡಿದರು.
ಇಸ್ಲಾಂ ಗುರು ಜೈನೀ ಕಾಮೀಲ್ ಸಖಾಫಿ ಮಾತನಾಡಿ ಇಂದು ಕನ್ನಡವನ್ನು ಕನ್ನಡಿಗರಿಂದ ಉಳಿಸಬೇಕಾದ ಸಂದರ್ಭ ಬಂದಿದೆ. ಶಾಲೆಗಳು, ಸಾಹಿತ್ಯದಲ್ಲಿ ಕನ್ನಡವನ್ನು ತಾತ್ಸಾರದಿಂದ ಕಾಣುವ ಮನಸ್ಥಿತಿ ಇದೆ. ಪ್ರಪಂಚದ ಸುಂದರ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
 ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ ಕನ್ನಡ ಇಂದು ಉಳಿದಿದ್ದರೆ ದಾವಣಗೆರೆಯಲ್ಲಿ ಮಾತ್ರ. ಬೇರೆ ಜಿಲ್ಲೆಗಳಂತೆ ಇಲ್ಲಿ ಅನ್ಯಭಾಷೆಗಳ ಪ್ರಭಾವ ಇಲ್ಲ. ಮಕ್ಕಳಿಗೆ ಕನ್ನಡದಲ್ಲೇ ಮಾತನಾಡಲು ಕಲಿಸಬೇಕು ಎಂದು ತಿಳಿಸಿದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ ಕನ್ನಡ ಉಳಿದಿರುವ ದಾವಣಗೆರೆಯೇ ರಾಜ್ಯದ ಎರಡನೇ ರಾಜಧಾನಿಯಾಗಬೇಕು ಎಂದು ಹೇಳಿದರು. ನಗರಪಾಲಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು ಇದಕ್ಕೆ ಕಡಿವಾಣ ಹಾಕಬೇಕು.  ಕೆಳಹಂತದ ನೌಕರರಲ್ಲಿ ಸಮಸ್ಯೆ ಹೆಚ್ಚಿದ್ದು, ಜನಪ್ರತಿನಿಧಿಗಳು, ಪಾಲಿಕೆ ಆಯುಕ್ತರು ನೌಕರರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
ಮೇಯರ್ ಕೆ. ಚಮನ್‌ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕನ್ನಡಪರ ಸಂಘಟನೆಗಳ ಮುಖಂಡರಾದ ಕೆ.ಜಿ. ಯಲ್ಲಪ್ಪ, ಅವಿನಾಶ್, ನಾಗೇಂದ್ರ ಬಂಡೀಕರ್, ದಾಕ್ಷಾಯಿಣಿ, ಸುವರ್ಣಮ್ಮ, ಪತ್ರಕರ್ತ ವರದರಾಜ್ ಹಾಗೂ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಇದ್ದರು. ನಂತರ ನಟ ಸಾಧು ಕೋಕಿಲಾ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬೆಳಗ್ಗೆ ಮೇಯರ್ ನೇತೃತ್ವದಲ್ಲಿ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡಗಳು ಮೆರುಗು ನೀಡಿದವು.
---