ಜಿಲ್ಲೆ

ನಿರೀಕ್ಷೆಗೂ ಮೀರಿ ಕೆಲಸ ನಿರ್ವಹಣೆ    ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿಶ್ವಾಸ   ನಾಯಕ ಸಮಾಜದಿಂದ ಸನ್ಮಾನ

ಡಿ. ಎಂ. ಮಹೇಶ್

ದಾವಣಗೆರೆ: ಚಿಕ್ಕೋಡಿ ಜನರು ನನಗೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ ಎಂದು ಚಿಕ್ಕೋಡಿ ಕ್ಷೇತ್ರದ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಇಲ್ಲಿನ ನಾಯಕರ ವಿದ್ಯಾರ್ಥಿನಿಲಯದಲ್ಲಿ ಜಿಲ್ಲಾ ನಾಯಕ ಸಮಾಜದಿಂದ ಗುರುವಾರ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತರೆ ಜಿಲ್ಲೆಗಳ ಸಚಿವರು, ಶಾಸಕರು, ಮುಖಂಡರು ನನ್ನ ಪರ ಪ್ರಚಾರ ಮಾಡಿ ಗೆಲುವಿಗೆ ಸಹಕರಿಸಿದ್ದಾರೆ ಎಂದರಲ್ಲದೆ ಧನ್ಯವಾದ ಹೇಳಿದರು.
ಉದ್ಯೋಗಕ್ಕೆ ಆದ್ಯತೆ:
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಮುಖಂಡರೂ ತೀರ್ಮಾನಿಸಿ ನನಗೆ ಎಂಪಿ ಟಿಕೆಟ್ ಕೊಟ್ಟಿದ್ದರು. ಪಕ್ಷದಲ್ಲಿ ಯಾವುದೇ ಅಪಸ್ವರ ಇರಲಿಲ್ಲ ಎಂದು ಪ್ರತಿಕ್ರಿಯಿಸಿದರು. ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ, ಯುವಕರು ಹಾಗೂ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಬೇಡಿಕೆ ಬಗ್ಗೆ ಸ್ಪಂದಿಸಲಾಗುವುದು ಎಂದರು.
ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಪಕ್ಷದ ವರಿಷ್ಠರಿಗೆ ದೂರು ನೀಡುವ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಕೇಳಲಾಗಿ ‘ಆ ಭಾಗದಲ್ಲಿ ಬಿಜೆಪಿಗೆ ಪ್ಲಸ್ ಆಗಿದೆ. ಈ ವಿಚಾರವಾಗಿ ಅಥಣಿ ಶಾಸಕರೊಂದಿಗೆ ತಂದೆ ಸತೀಶ್ ಜಾರಕಿಹೊಳಿ ಮಾತನಾಡಿ, ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.
ಉತ್ತರ ಕರ್ನಾಟಕಕ್ಕೆ ಪ್ರವಾಹ, ಬರಗಾಲ ಬಂದಾಗ ಯಾರೂ ಇತ್ತ ಗಮನ ಹರಿಸುವುದಿಲ್ಲ. ಚಳಿಗಾಲದ ಅಧಿವೇಶನಕ್ಕೆ ಮಾತ್ರವೇ ಶಾಸಕರು ಹಾಜರಾಗುತ್ತಾರೆ. ಮುಂಬರುವ ದಿನದಲ್ಲಿ ಎಲ್ಲ ನಾಯಕರು ಒಂದಾಗಿ ಉತ್ತರ ಕರ್ನಾಟಕದ ಸಮಸ್ಯೆ ಪರಿಹರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಪ್ರತ್ಯೇಕ ರಾಜ್ಯದ ಮಾತಿಲ್ಲ:
ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳಿಲ್ಲ. ಹೀಗಾಗಿ, ಕೆಲವರಿಂದ ಆಗಾಗ್ಗೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ಅಂತಹ ಸಂದರ್ಭ ಇಂದಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದರೆ ಸಮಾನವಾಗಿ ಪರಿಹರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಜಾರಕಿಹೊಳಿ, ಜಗಳೂರು ಶಾಸಕ ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ತಾಲೂಕು ಘಟಕದ ಅಧ್ಯಕ್ಷ ಹದಡಿ ಹಾಲಪ್ಪ, ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯರಾದ ಸವಿತಾ ಗಣೇಶ ಹುಲ್ಮನಿ,  ಮೀನಾಕ್ಷಿ ಜಗದೀಶ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಕೆ.ಪಿ. ಪಾಲಯ್ಯ, ಹೊದಿಗೆರೆ ರಮೇಶ್,  ಹದಡಿ ರಾಜಣ್ಣ, ಶ್ಯಾಗಲೆ ಮಂಜುನಾಥ್, ರಾಘು ದೊಡ್ಮನಿ, ವಿಜಯಲಕ್ಷ್ಮಿ, ಪಾರ್ವತಿ, ಗೌರಮ್ಮ, ಹೊನ್ನಮ್ಮ, ಮಧು ಮದಕರಿ, ರವಿತೇಜ ಇತರರಿದ್ದರು.