ಜಿಲ್ಲೆ

ದಾವಣಗೆರೆ ಹಿಂದು ಮಹಾಗಣಪತಿಗೆ ಅಭೂತಪೂರ್ವ ವಿದಾಯ

ದಾವಣಗೆರೆ: ನಗರದಲ್ಲಿ ಶನಿವಾರ ಆಯೋಜಿಸಿದ್ದ ಹಿಂದು ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಡಿಜೆ ಕೊರಗಿದ್ದರೂ ಜಾನಪದ ಕಲಾ ತಂಡಗಳ ಹಿಮ್ಮೇಳದ ಆಕರ್ಷಣೆಯೊಂದಿಗೆ ಗಣೇಶನಿಗೆ ಅಭೂತಪೂರ್ವ ವಿದಾಯ ನೀಡಲಾಯಿತು.

ಜಿಲ್ಲಾದ್ಯಂತ ಗಣೇಶೋತ್ಸವದಲ್ಲಿ ಡಿಜೆ ಸದ್ದಡಗಿತ್ತು. ಹಿಂದು ಮಹಾಗಣಪತಿ ಟ್ರಸ್ಟ್‌ನ ಶನಿವಾರದ ಮೆರವಣಿಗೆಯಲ್ಲಿ ಅನುಮತಿ ಸಿಗದಿದ್ದರೂ ಡಿಜೆ ತರಬಹುದೆಂಬ ಲೆಕ್ಕಾಚಾರ ಸುಳ್ಳಾದರೂ ಹಿಂದುಗಳ ಶಕ್ತಿ ಪ್ರದರ್ಶನಕ್ಕೆ ಶೋಭಾಯಾತ್ರೆ ವೇದಿಕೆಯಾಯಿತು.

ಬೆಳಗ್ಗೆ 10-30ಕ್ಕೆ ಹೈಸ್ಕೂಲ್ ಮೈದಾನದಲ್ಲಿ ನಿರೀಕ್ಷಿತ ಜನರೇ ಇರಲಿಲ್ಲ. ಆದರೆ 12 ಗಂಟೆ ಹೊತ್ತಿಗೆ ಸಹಸ್ರ ಸಂಖ್ಯೆಯ ಯುವಕರು ವಿವಿಧೆಡೆಗಳಿಂದ ಜಮಾಯಿಸಿದರು. ತಡವಾಗಿ ಆರಂಭವಾದರೂ ಮೆರವಣಿಗೆಯಲ್ಲಿ ಜೋಷ್ ತಣ್ಣಗಾಗಲಿಲ್ಲ.

ಡಿಜೆ ಬದಲಾಗಿ ಈ ಬಾರಿ ಹಾವೇರಿ ಜಿಲ್ಲೆಯ ಎರಡು ಬ್ರಾಸ್ ಆರ್ಕೆಸ್ಟ್ರಾಗಳು ಸದ್ದು ಮಾಡಿದವು! ನೆತ್ತಿ ಸುಡುವ ಬಿಸಿಲಿದ್ದರೂ ಈ ಆರ್ಕೆಸ್ಟ್ರಾಗಳಿಂದ ಬಂದ ಸಂಗೀತಕ್ಕೆ ವಾಹನಗಳ ಸುತ್ತ ಯುವಕ-ಯುವತಿಯರು ಹುಚ್ಚೆದ್ದು ಕುಣಿದರು. ಮೆರವಣಿಗೆ ಸಂಜೆ 5ರ ಹೊತ್ತಿಗೆ ಜಯದೇವ ವೃತ್ತಕ್ಕೆ ಬರುವ ಹೊತ್ತಿಗೆ ಕಾರ್ಮೋಡ ಕರಗಿ ಒಂದೆರಡು ನಿಮಿಷ ಗಣೇಶನಿಗೆ ವರುಣಾಭಿಷೇಕ ಮಾಡಿತು!

ಪಂಚಮುಖಿ ಗಣೇಶನನ್ನು ಹೊತ್ತ ಟ್ರಾೃಕ್ಟರ್ ಚಲಾಯಿಸುವ ಮೂಲಕ ಎಸ್ಪಿ ಉಮಾ ಪ್ರಶಾಂತ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಕುವೆಂಪು ರಸ್ತೆ, ಪಿ.ಬಿ.ರಸ್ತೆ ಮಾರ್ಗದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಂತ್ಯಗೊಂಡಿತು. ನಂತರ ಬಾತಿ ಕೆರೆಯಲ್ಲಿ ಗಣೇಶನನ್ನು ರಾತ್ರಿ ವಿಸರ್ಜನೆ ಮಾಡಲಾಯಿತು.

ಜೈ ಶ್ರೀರಾಮ್, ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಮೊದಲಾದ ಘೋಷಣೆಗಳು ಅನುರಣಿಸಿದವು. ಮೆರವಣಿಗೆಯುದ್ದಕ್ಕೂ ಕೇಸರಿ ಶಲ್ಯ ಧರಿಸಿದ್ದ ಭಕ್ತರ ದಂಡೇ ಹೆಚ್ಚಿತ್ತು. ಅಲ್ಲಲ್ಲಿ ಸೆಲ್ಪಿ ತೆಗೆದುಕೊಳ್ಳುವುದು, ವಿಡಿಯೋ ಮಾಡುವುದು ಸಾಮಾನ್ಯವಾಗಿತ್ತು.

ಧ್ವಜಗಳು, ಪ್ರಮುಖರ ಭಾವಚಿತ್ರ ದರ್ಶನ

ಭಗವಾಧ್ವಜಗಳ ಜತೆಗೆ ಅಂಬೇಡ್ಕರ್, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ನಾಡಪ್ರಭು ಕೆಂಪೇಗೌಡ, ಆಂಜನೇಯನ ಚಿತ್ರಗಳಿದ್ದ ಹಾಗೂ ಜೈ ಶ್ರೀರಾಮ್ ಬರಹದ ದೊಡ್ಡ ಬಾವುಟಗಳು ಹಾರಾಡಿದವು. ಚಿಣ್ಣರು ಕೂಡ ಕುಣಿದು ಕುಪ್ಪಳಿಸಿದರು.

ಚಿತ್ರನಟ ದಿ. ಪುನೀತ್ ರಾಜಕುಮಾರ್ ಭಾವಚಿತ್ರ ಯಾತ್ರೆಯಲ್ಲಿ ಹರಿದಾಡಿದರೆ ‘ಬೊಂಬೆ ಹೇಳುತ್ತೈತೆ ಹಾಡು’ ಸಹ ಮಾರ್ದನಿಸಿತ್ತು. ಇನ್ನು ನಟ ದರ್ಶನ್ ಭಾವಚಿತ್ರ ಹಿಡಿದ ಯುವಕರು ‘ಡಿ ಬಾಸ್’ ಎಂದು ಕೂಗಿದರೆ, ಮತ್ತೊಂದು ಗುಂಪು ‘ಜೈ ಭೀಮ್’ ಎಂದೂ ಘೋಷಣೆ ಹಾಕಿತು.

ಕೆಲ ಯುವಕರು ರಸ್ತೆಗಳ ಮಧ್ಯೆ ದೊಡ್ಡ ಬಾವುಟಗಳನ್ನು ತಿರುಗಿಸುವ ಕಸರತ್ತು ನಡೆಸಿದವು. ಕೆಲವನ್ನು ಪೊಲೀಸರು ವಶಕ್ಕೆ ಪಡೆದರು. ಮಹಿಳಾ ಪೊಲೀಸರೊಂದಿಗೆ ಅನುಚಿತ ವರ್ತನೆ ಮಾಡಿದ ಆರೋಪದಡಿ ಯುವಕನೊಬ್ಬ ದುರ್ಗಾ ಪಡೆ ಕೆಂಗಣ್ಣಿಗೆ ಗುರಿಯಾದರೆ, ಮತ್ತೊಬ್ಬನನ್ನು ಪೊಲೀಸರು ವ್ಯಾನ್‌ಗೆ ಹತ್ತಿಸಿದರು.

ಮೆರವಣಿಗೆ ಮಾರ್ಗದ ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು. ಯಾತ್ರೆಯನ್ನು ಜನರು ಮನೆ, ಕಾಲೇಜು ಕಟ್ಟಡ, ಬಸ್ ತಂಗುದಾಣ, ವಾಣಿಜ್ಯ ಸಂಕೀರ್ಣಗಳ ಮೇಲೆ ಹತ್ತಿ ನಿಂತು ವೀಕ್ಷಿಸಿದರು. ನಗರದ ಹೊರಗೆ ಖಾಸಗಿ ಬಸ್‌ಗಳ ನಿಲುಗಡೆ ವ್ಯವಸ್ಥೆ ಇದ್ದರಿಂದ ಪ್ರಯಾಣಿಕರ ಪರದಾಟ ಕಂಡುಬಂತು.

ಆರ್ಕೆಸ್ಟ್ರಾ, ಕಲಾ ತಂಡಗಳ ಕಮಾಲ್

ಹುಟ್ಟಿದರೇ ಕನ್ನಡನಾಡಲ್ ಹುಟ್ಟಬೇಕು, ಚೋರರಿಗೊಂದು ಕಾಲ.., ಕಣ್ಣಲ್ಲಿ ಪ್ರೀತಿ.. ಮೊದಲಾದ ಹಾಡುಗಳನ್ನು ಆರ್ಕೆಸ್ಟ್ರಾ ಕಲಾವಿದರು ಹಾಡಿದರೆ, ಚಂಡೆ ಮದ್ದಳೆ ತಂಡದ ವಿಶೇಷ ನಾದ ಯಾತ್ರೆಗೆ ಮೆರುಗು ನೀಡಿತು. ಅಶ್ವಾರೂಢ ಶಿವಾಜಿ ಮೂರ್ತಿ, ಮತ್ತೊಂದು ಗಣೇಶ ಮೂರ್ತಿ ಕೂಡ ಸಾಗಿತು.

ಗಾರುಡಿ ಗೊಂಬೆಗಳು, ಪೂಜಾ ಕುಣಿತ, ಡೊಳ್ಳು, ನಂದಿಕೋಲು, ಸಮಾಳ, ವೀರಗಾಸೆ, ಕೀಲುಕುದುರೆ ಜನರ ಗಮನ ಸೆಳೆದವು. ನಾಸಿಕ್ ಡೋಲಿನ ಐದಕ್ಕೂ ಹೆಚ್ಚು ತಂಡಗಳು ಭರ್ಜರಿ ಸದ್ದು ಮಾಡಿದವು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಭಕ್ತರು ಪ್ರಸಾದ, ಕುಡಿವ ನೀರಿನ ವ್ಯವಸ್ಥೆ ಮಾಡಿದ್ದರು.

ವ್ಯಾಪಾರಿಗಳು ಖುಷ್

ಯಾತ್ರೆ ಮಾರ್ಗದಲ್ಲಿ ಅಂಗಡಿ, ಮುಂಗಟ್ಟುಗಳು ಬಹುತೇಕ ಬಂದ್ ಆಗಿದ್ದವು. ಕೇಸರಿ ಶಲ್ಯ ಮಾರಾಟಕ್ಕೆ ಬೇಡಿಕೆ ಕಂಡುಬಂದಿತು. ಉಳಿದಂತೆ ಕುಡಿವ ನೀರಿನ ಬಾಟಲಿ, ಐಸ್‌ಕ್ರೀಂ, ಕಬ್ಬಿನ ಹಾಲು, ಸೋಡಾ, ಮಜ್ಜಿಗೆ, ಶೇಂಗಾ, ಮೆಕ್ಕೆಜೋಳ, ಹಣ್ಣು ಮಾರಾಟಗಾರರ ಜೇಬು ತುಂಬಿತು. ಜ್ಯೂಸ್ ಸೆಂಟರ್, ಮಸಾಲ ಮಂಡಕ್ಕಿ ಅಂಗಡಿಗಳು, ಕೆಲವು ಹೋಟೆಲ್‌ಗಳು ಜನರಿಂದ ಕಿಕ್ಕಿರಿದಿದ್ದವು.

ಗಣ್ಯರು ಭಾಗಿ

ಯಾತ್ರೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಗಣೇಶನಿಗೆ ಮಾಲಾರ್ಪಣೆ ಮಾಡಿ ಕೆಲ ನಿಮಿಷ ಮಾತನಾಡಿ ಹೊರಟರು. ಹಿಂದು ಮಹಾಗಣಪತಿ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಲೋಕಿಕೆರೆ ನಾಗರಾಜ್, ಸತೀಶ್ ಪೂಜಾರಿ, ಎಸ್.ಟಿ.ವೀರೇಶ್, ಯಶವಂತರಾವ್ ಜಾಧವ್, ಟ್ರಸ್ಟ್‌ನ ಸದಸ್ಯರಾದ ಜಯಪ್ರಕಾಶ್ ಮಾಗಿ, ಆದಿತ್ಯ ಮಂಜುನಾಥ್, ಗಿರಿಸಿದ್ದೇಶ್, ಕಮಲ್‌ಗಿರಿ, ಜರೇಕಟ್ಟೆ ಚಂದ್ರು, ಐಗೂರು ಪ್ರಕಾಶ್, ಜರೇಕಟ್ಟೆ ಮಂಜುನಾಥ್ ಇದ್ದರು.

ಪೊಲೀಸರ ಹರಸಾಹಸ

ಶೋಭಾಯಾತ್ರೆಗೆ ಸೇರಿದ್ದ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು. ಎಎಸ್ಪಿ ಪರಮೇಶ್ವರ ಹೆಗಡೆ ಅವರು ಖುದ್ದು ಕಾರ್ಯಾಚರಣೆಗೆ ಇಳಿದಿದ್ದರು.

ದಾವಣಗೆರೆ ಅಲ್ಲದೆ ಚಿತ್ರದುರ್ಗ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳಿಂದ 4ಸಾವಿರಕ್ಕೂ ಹೆಚ್ಚು ಅಧಿಕಾರಿ-ಸಿಬ್ಬಂದಿ ನಿಯೋಜಿಸಲಾಗಿತ್ತು. 2 ಕೆಎಸ್‌ಆರ್‌ಪಿ, 10 ಡಿಎಆರ್ ತುಕಡಿ, 4 ಕ್ಷಿಪ್ರ ಕಾರ್ಯಪಡೆ, ದುರ್ಗಾ ಪಡೆ ಕೂಡ ಕಾರ್ಯ ನಿರ್ವಹಿಸಿದವು. ಬೃಹತ್ ಕಟ್ಟಡಗಳ ಮೇಲೆ ಕೆಲ ಪೊಲೀಸರು ದುರ್ಬೀನು ಹಿಡಿದಿದ್ದರೆ, ಅಲ್ಲಲ್ಲಿ ಡ್ರೋನ್‌ಗಳ ನಿಗಾ ಕಂಡುಬಂದಿತು.