ದಾವಣಗೆರೆ: ಹೆತ್ತವರು ಗಳಿಸಿದ ಕೃಷಿ ಭೂಮಿಯನ್ನು ಹುಡುಕಿ ಆರೋಗ್ಯ ಉಳಿಸಿಕೊಳ್ಳಲು ಹಾಗೂ ಬಿತ್ತನೆ ಬೀಜ ಸಂರಕ್ಷಿಸಲು ಇಂಜಿನಿಯರ್, ವೈದ್ಯರು, ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಆದರೆ ರೈತರ ಮಕ್ಕಳಿಗೇಕೆ ಈ ಪರಿಜ್ಞಾನ ಬರುತ್ತಿಲ್ಲ? ಎಂದು ಮೈಸೂರಿನ ಬೀಜ ಸಂರಕ್ಷಕಿ ಪದ್ಮಾವತಮ್ಮ ಪ್ರಶ್ನಿಸಿದರು.
ಬೆಂಗಳೂರಿನ ಕೃಷಿ ತಂತ್ರಜ್ಞಾನಗಳ ಸಂಶೋಧನಾ ಅನ್ವಯಿಕ ಸಂಸ್ಥೆ ವಲಯ-11, ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆ, ಐಕಾಂತಿಕ ಸಂಸ್ಥೆ ಸಹಯೋಗದಲ್ಲಿ ಭಾನುವಾರ ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪಾರಂಪರಿಕ ಬೀಜ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಎಲ್ಲೆಡೆ ಬಿತ್ತನೆ ಬೀಜ, ಮನೆ, ಸಂಸಾರ ಎಲ್ಲವೂ ರೆಡಿಮೇಡ್ ಆಗಿಬಿಟ್ಟಿದೆ. ಇರುವ ಕೃಷಿಭೂಮಿ ಮಾರಿ ಮಗ ಅಂಬಾನಿ ಕಾರು ಕೊಳ್ಳುತ್ತಾನೆ, ಆರ್‌ಸಿಸಿ ಮನೆ ಕಟ್ಟುತ್ತಾನೆ ಎಂದುಕೊಳ್ಳುವುದು ಸರಿಯಲ್ಲ. ವಿಧಾನಸಭೆ, ಕಚೇರಿ ಅಥವಾ ಹೋಟೆಲ್ ಎಲ್ಲೇ ಆಗಲಿ ಎಲ್ಲರೂ ರೈತರು ಬೆಳೆದದ್ದನ್ನೇ ಸೇವಿಸುತ್ತಾರೆ. ಹೀಗಾಗಿ ಕೃಷಿ ಜಮೀನು ಮಾರದೆ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಮನವಿ ಮಾಡಿದರು.
ವೈದ್ಯರು ಬರೆದುಕೊಟ್ಟ ಟಾನಿಕ್ ಹೇಗಿದ್ದರೂ ತಾಯಿ, ಅದನ್ನು ಮಗುವಿಗೆ ಕುಡಿಸುತ್ತಾಳೆ. ಅದೇ ರೀತಿಯಲ್ಲಿ ನಮ್ಮ ಭೂಮಿತಾಯಿಯನ್ನು ನೈಸರ್ಗಿಕ ಪದ್ಧತಿಯಡಿ ಶ್ರಮವಹಿಸಿ ಉಳಿಸಬೇಕಿದೆ. ಭೂಮಿಗೆ ಬೇಕಾದ ಜೀವಾಮೃತ, ಗೊಬ್ಬರ ಹಾಕಬೇಕು. ಬೆಳಗ್ಗೆ ಎದ್ದು ಭೂಮಿತಾಯಿ ಸುತ್ತ ತಿರುಗಿ ಬಂದಲ್ಲಿ ಭೂಮಿ ದಾರಿ ತೋರಿಸುತ್ತಾಳೆ ಎಂದರು.
ನನ್ನದು 3 ಎಕರೆ ಜಮೀನಿದ್ದರೂ 150 ತಳಿಗಳ ಬೀಜವನ್ನು ಸಂರಕ್ಷಣೆ ಮಾಡಿದ್ದೇನೆ. ನಾಲ್ಕನೇ ತರಗತಿ ಓದಿದ್ದರೂ ದೆಹಲಿಯಲ್ಲಿ ಸನ್ಮಾನ ಮಾಡಿಸಿಕೊಂಡು ಬಂದಿದ್ದೇನೆ. ಬಾಡಿಗೆ ಮನೆಯಲ್ಲಿದ್ದರೂ ಗಿಡಗಳನ್ನು ಬೆಳೆಸಲು ಒಂದಷ್ಟು ಜಾಗ ಮೀಸಲಿಡಿ. ಹಣ್ಣಿನ ಸಿಪ್ಪೆ, ತರಕಾರಿ- ಸೊಪ್ಪಿನ ತ್ಯಾಜ್ಯವನ್ನು ತಿಪ್ಪೆಗೆ ಹಾಕದೆ ನಿಮ್ಮ ಹೂಕುಂಡಕ್ಕೆ ಹಾಕಿದರೆ ಅದು ಗೊಬ್ಬರವಾಗಲಿದೆ ಎಂದು ಕಿವಿಮಾತು ಹೇಳಿದರು.
ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯ ಕೃಷ್ಣಪ್ರಸಾದ್ ಮಾತನಾಡಿ ನಾವಿಂದು ಎಕರೆಗೆ 35ರಿಂದ 40 ಕ್ವಿಂ ಅಕ್ಕಿ ಬೆಳೆಯುತ್ತಿದ್ದೇವೆ. ಆದರೆ ತಂಜಾವೂರಿನಲ್ಲಿ 50ರಿಂದ 60 ಕ್ವಿಂ. ಅಕ್ಕಿ ಬೆಳೆದವರಿಗೆ ತಾಮ್ರಪತ್ರ ನೀಡುವ ವ್ಯವಸ್ಥೆ ಸ್ವಾತಂತ್ರೃ ಅವಧಿಯಿಂದಲೇ ಬಂದಿದೆ, ಭತ್ತದಲ್ಲಿ ಅನೇಕ ವಿಧದ ತಳಿಗಳಿವೆ, ರತ್ನಚೂಡಿ, ರಾಜಮುಡಿ, ಆನೆಕಂಬು, ಕರಿ ಕಾಬಲಿ,ನವರಾ, ಸರ್ಪಸೂತ್ರ, ನೆರೆಗೂಳಿ ಹೀಗೆ ಭತ್ತದ ತಳಿಗಳೇ ಔಷಧ ರೂಪವಾಗಿದ್ದವು ಎಂದು ಹೇಳಿದರು.
ನಮ್ಮ ಸಂಸ್ಥೆಯಿಂದ 68 ಬಗೆಯ ರಾಗಿ ತಳಿ ಸಂಗ್ರಹಿಸಿದ್ದೇವೆ, ಮಜ್ಜಿಗೆ ರಾಗಿ, ಜಗಳೂರು ರಾಗಿ, ಬಳೆಪಟ್ಟಿ, ಕೋಣಕುಂಬಿ ಮೊದಲಾದ ತಳಿಗಳಿವೆ. ಅಂಗಡಿಯಲ್ಲಿ ಬಿತ್ನೆ ಬೀಜ ತಂದರೆ ಒಳ್ಳೆಯದೆಂಬ ಭ್ರಮೆ ಬೇಡ. ಪಾರಂಪರಿಕ ಬೀಜಗಳಲ್ಲಿ ಹೆಚ್ಚು ಉಪಯುಕ್ತತೆ ಇದೆ. ದೇಸೀ ಬೆಳೆ ಬೆಳೆದು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅಡಕೆ ತೋಟಗಳಲ್ಲಿ ಅಡಕೆ ಮಧ್ಯೆ ಗೆಡ್ಡೆ ಗೆಣಸು ಬೆಳೆಯಬೇಕು ಎಂದು ವಿವರಿಸಿದರು.
ಭಾರತ್ ಬೀಜ ಸ್ವರಾಜ್ ಮಂಚ್ ರಾಷ್ಟ್ರೀಯ ಸಂಚಾಲಕ ಜಾಕೋಬ್ ನೆಲ್ಲಿ ತಾನಂ ಮಾತನಾಡಿ ಬಿತ್ತನೆ ಬೀಜಗಳ ವೈವಿಧ್ಯವನ್ನು ಕಾಯ್ದುಕೊಳ್ಳಬೇಕಿದೆ. ಪಾರಂಪರಿಕ ಬೀಜಗಳು ಸಂಪ್ರದಾಯದಂತೆ ಸ್ಥಿರವಾಗಿರುತ್ತವೆ ಎಂದು ಭಾವಿಸುವುದು ತಪ್ಪು. ಈ ಬೀಜಗಳಿಗೆ ಅಂತಾರಾಷ್ಟ್ರೀಯ ಕಾನೂನು, ಹಕ್ಕುಸ್ವಾಮ್ಯ ಕಾಯ್ದೆ ಸೇರಿ ಹಲವು ಸವಾಲುಗಳಿವೆ. ವಿವಿಗಳೂ ಸಹ ಬೀಜಗಳ ಮೆಲೆ ಹಕ್ಕುಸ್ವಾಮ್ಯ ಹೊಂದಲು ಮುಂದಾಗಉತ್ತಿರುವುದು ವಿಷಾದನೀಯ ಎಂದರು.
ಹಿರಿಯ ವಿಜ್ಞಾನಿ ಡಾ.ಟಿ.ಎನ್. ದೇವರಾಜ್ ಮಾತನಾಡಿ ಕರ್ನಾಟಕ ಬೀಜ ಸಂರಕ್ಷಕರ ಬಳಗವನ್ನು ಸ್ಥಾಪಿಸುವ ಇರಾದೆ ನಮಗಿದೆ. ದಾವಣಗೆರೆಯಲ್ಲಿ ಬರುವ ದಿನಗಳಲ್ಲಿ ಇನ್ನಷ್ಟು ಮೇಳ ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಬೆಂಗಳೂರಿನ ಕೈತೋಟ ಪರಿಣತ ತಜ್ಞ ರಾಜೇಂದ್ರ ಹೆಗಡೆ, ಐಕಾಂತಿಕ ಸಂಸ್ಥೆಯ ರಾಘವ್ ಇದ್ದರು. ವಿಷಯ ತಜ್ಞ ಎಂ.ಜಿ.ಬಸವನಗೌಡ ಸ್ವಾಗತಿಸಿದರೆ, ಟಾ.ಟಿ.ಜಿ. ಅವಿನಾಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಜಬೀವುಲ್ಲಾ ವಂದಿಸಿದರು