ದಾವಣಗೆರೆ: ಪರವಾನಗಿ ಪಡೆದ ಬಂದೂಕು ಅಥವಾ ಇತರೆ ಶಸ್ತ್ರಾಸ್ತ್ರವನ್ನು ನಾಗರಿಕರು ಸುರಕ್ಷತೆಯಿಂದ ಇರಿಸುವ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್ ಹೇಳಿದರು.
ನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ತರಬೇತಿ ಪಡೆದ ಬಳಿಕ ನೀವು ಆತ್ಮರಕ್ಷಣೆಗಾಗಿ ಬಂದೂಕು, ರೈಫಲ್ ಅಥವಾ ಪಿಸ್ತೂಲನ್ನು ಖರೀದಿಸಬಹುದು. ಆದರೆ ಅವೆಷ್ಟು ಒಳ್ಳೆಯವೋ ಅಷ್ಟೇ ಕೆಟ್ಟದ್ದಾಗಿವೆ. ಅವನ್ನು ಸುರಕ್ಷವಾಗಿಡುವುದು ವಾರಸುದಾರರ ಜವಾಬ್ದಾರಿ ಎಂದರು.
ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಗುಂಡುಗಳನ್ನು ಲೋಡ್ ಮಾಡಿ ಇರಿಸಬಾರದು. ಮಕ್ಕಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು. ಮಿಸ್ ಫೈರ್ ಅಥವಾ ಆಕಸ್ಮಿಕ ಬಳಕೆಯಾಗಬಾರದು. ಆತ್ಮರಕ್ಷಣೆ ಹೊರತಾಗಿ ಕಾನೂನುಬಾಹಿರ ಬಳಕೆಯಾದಲ್ಲಿ ಶಸ್ತ್ರಾಸ್ತ್ರ ವಶಕ್ಕೆ ಪಡೆಯುವ ಜತೆಗೆ ನಿಮ್ಮನ್ನೂ ಬಂಧನಕ್ಕೆ ಒಳಪಡಿಸಬಹುದಾಗಿದೆ ಎಂದು ಹೇಳಿದರು.
ಬಂದೂಕು ಅಥವಾ ರೈಫಲ್‌ಗಳ ಕಡ್ಡಾಯ ಪ್ರಮಾಣಪತ್ರಕ್ಕಾಗಿ ಇತ್ತೀಚೆಗೆ ಜನರು ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 12 ತಿಂಗಳ ನಿರಂತರ ತರಬೇತಿ ನೀಡಲಾಗುತ್ತದೆ. ಅಲ್ಲಿಗೆ ತೆರಳಿ ತರಬೇತಿ ಪಡೆಯುವುದು ಕಷ್ಟಕರ. ಹಾಗಾಗಿ ಜಿಲ್ಲಾಡಳಿತದ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲೆಯಲ್ಲಿಯೇ 10 ದಿನ ಅವಧಿಯ ತರಬೇತಿ ನಡೆಸಲಾಗುತ್ತಿದೆ ಎಂದರು.
ಇತ್ತೀಚೆಗೆ ಬಂದೂಕು ಪರವಾನಗಿ ಕೊಡಿಸುವ ನೆಪದಲ್ಲಿ ಕೆಲವರು ಏಜೆಂಟರು ಹಣ ಪೀಕುತ್ತಿದ್ದು ಅಂಥವರ ಬಗ್ಗೆಯೂ ಎಚ್ಚರ ವಹಿಸಬೇಕು. ಪೊಲೀಸ್ ನಡೆಸುವ ಈ ಶಿಬಿರ ವೈದ್ಯರು, ವಕೀಲರು ಸೇರಿ ಎಲ್ಲ ಸಂಘಟನೆಗಳಿಗೂ ಪರಿಚಯವಾಗಬೇಕು. ಶಿಬಿರದಲ್ಲಿ ತರಬೇತಿ ನೀಡಿದಷ್ಟೂ ನಾಗರಿಕರು ಪೊಲೀಸ್‌ಸ್ನೇಹಿಯಾಗಿ ಕೆಲಸ ಮಾಡಬಲ್ಲರು ಎಂದು ವಿಶ್ವಾಸವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಡಿಎಆರ್ ಪೊಲೀಸ್ ನಿರೀಕ್ಷಕ ಎಚ್.ಬಿ.ಸೋಮಶೇಖರ್, ಹಾಗೂ ಡಿಎಆರ್ ಸಿಬ್ಬಂದಿಗಳಾದ ಕೆ.ಪಿ.ಶರತ್, ಬಿ.ಎಸ್. ಪುಟ್ಟಪ್ಪ, ಟಿ.ಬಸವರಾಜ್ ,ಎಚ್. ವೇದಮೂರ್ತಿ, ಶಿಬಿರಾರ್ಥಿಗಳಾದ ಎಂ.ಜಿ.ಶ್ರೀಕಾಂತ್, ಸಿ.ಕೆ. ರಂಗಪ್ಪ ಇತರರಿದ್ದರು.