ದಾವಣಗೆರೆ: ನ್ಯಾಯಬೆಲೆ ಅಂಗಡಿಗಳು ವಿತರಿಸುವ ಧಾನ್ಯದ ತೂಕದಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ. ಅಲ್ಲದೆ ಪಡಿತರದಾರರ ಪಾಲಿನ ಧಾನ್ಯವನ್ನು ತಲಾ ಕೆಜಿಗೆ 16, 17 ರೂ. ನಂತೆ ಅಂಗಡಿಯವರೇ ಖರೀದಿಸುತ್ತಿದ್ದಾರೆ!
- ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಸರ್ಕಾರವೇ ನೇಮಿಸಿದ ಈ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರೇ ಮಾಡಿದ ಆರೋಪವಿದು.
ವಿಷಯ ಪ್ರಸ್ತಾಪಿಸಿದ ಸದಸ್ಯ ಡೋಲಿ ಚಂದ್ರು ಈ ವಿಚಾರವಾಗಿ ನನ್ನ ಬಳಿ ವಿಡಿಯೋಗಳಿವೆ. ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಮಿತಿ ಅಧ್ಯಕ್ಷರು, ಸದಸ್ಯರಿಗೆ ಪರಿಶೀಲನೆ ಮಾಡುವ ಅಧಿಕಾರ ಕೊಡಿ ಎಂದು ಹೇಳಿದರು.
ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ ಈ ವಿಚಾರವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ರ‌್ಯಾಂಡಮ್ ಆಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ಸಮಿತಿ ಅಧ್ಯಕ್ಷರಿಗೆ ಪರಿಶೀಲನೆ ಅಧಿಕಾರ ನೀಡುವ ಬಗ್ಗೆ ಸುತ್ತೋಲೆಯಲ್ಲಿ ಪ್ರಸ್ತಾಪವಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.
ಎಸ್‌ಜೆಎಂ ನಗರದ ನ್ಯಾಯಬೆಲೆ ಅಂಗಡಿಯವರು ಬೂದಾಳ್ ರಸ್ತೆಯಲ್ಲಿ ರೇಷನ್ ಅಂಗಡಿ ತೆರೆದಿದ್ದಾರೆ. ಎಸ್‌ಜೆಎಂ ನಗರ ಎಂಬುದನ್ನು ಅಳಿಸಿಹಾಕಿದ್ದಾರೆ. 3 ಕಿಮೀ ದೂರದ ಬೂದಾಳ್ ರಸ್ತೆಗೆ ಹೋಗಿ ಕೆಲವರು ಪಡಿತರ ತರುತ್ತಿದ್ದಾರೆ. ಬಹುತೇಕರಿಗೆ ಪಡಿತರ ಬದಲಾಗಿ ಅಂಗಡಿಯವರೇ ಹಣ ನೀಡುತ್ತಿದ್ದಾರೆ ಎಂದು ದೂರಿದರು.
ಈ ವಿಚಾರವಾಗಿ ತಕ್ಷಣವೇ ಪರಿಶೀಲಿಸಿ ಕಠಿಣ ಕ್ರಮ ವಹಿಸಬೇಕೆಂದು ಆಹಾರ ಇಲಾಖೆ ಉಪನಿರ್ದೇಶಕರಿಗೆ ಸಿಇಒ ಸೂಚನೆ ನೀಡಿದರು. ಸದಸ್ಯ ಅನೀಸ್‌ಪಾಷಾ ನೀಡಿದ ಸಲಹೆಯಂತೆ ಎಲ್ಲ ಐದು ಗ್ಯಾರಂಟಿ ಯೋಜನೆಗಳ ಸಂಬಂಧ ಬಂದ ದೂರುಗಳು, ಪರಿಹಾರ, ಬಾಕಿ ಪ್ರಕರಣಗಳ ಕುರಿತು ಮುಂದಿನ ಸಭೆಯಲ್ಲಿ ಪ್ರಸ್ತಾಪಿಸಬೇಕು. ಆಯಾ ಯೋಜನೆ ಸಂಬಂಧ ಸಹಾಯವಾಣಿ ತೆರೆಯಬೇಕೆಂದೂ ಸೂಚಿಸಿದರು.
ಕೇಂದ್ರ ಕಚೇರಿ ಮಾಹಿತಿಯಂತೆ ಜಿಲ್ಲೆಯಲ್ಲಿ, ನಿಗದಿಪಡಿಸಿದ ವಾರ್ಷಿಕ ಆದಾಯ ಮೀರಿದ 39 ಸಾವಿರ ಅನರ್ಹ ಪಡಿತರ ಕಾರ್ಡ್‌ಗಳಿದ್ದು ಪರಿಶೀಲಿಸಿ ವರದಿ ನೀಡುವಂತೆ ಆಹಾರ ನಿರೀಕ್ಷಕರಿಗೆ ಸೂಚಿಸಲಾಗಿದೆ ಎಂದು ಆಹಾರ ನಾಗರಿಕ ಪೂರೈಕೆ ಇಲಾಖೆ ಡಿಡಿ ಸಿದ್ರಾಮ ಮಾರಿಹಾಳ್ ತಿಳಿಸಿದರು.
2963 ಕಾರ್ಡ್‌ದಾರರು ಆದಾಯ ತೆರಿಗೆ ಪಾವತಿದಾರರಿದ್ದು ಪರಿಶೀಲನೆ ನಡೆದಿದೆ. 68 ಮಂದಿ ನೌಕರರು ಇದರ ಲಾಭ ಪಡೆದಿದ್ದು ಸರ್ಕಾರಕ್ಕೆ ವರದಿ ಮಾಡಲಾಗುವುದು. ಮೃತರಾದ 4332 ಮಂದಿ ಪಡಿತರದಾರರ ಹೆಸರು ಕೈಬಿಡಲಾಗಿದೆ.
ಕೇಂದ್ರ ಸರ್ಕಾರದ ವರದಿಯಂತೆ ಗ್ರಾಮೀಣ ಪ್ರದೇಶದಲ್ಲಿ ಶೇ.76, ಪಟ್ಟಣ ಪ್ರದೇಶದಲ್ಲಿ ಪ್ರತಿಶತ 49ರಷ್ಟು ಬಡತನ ಪ್ರಮಾಣವಿದೆ. ಆಹಾರ ಸುರಕ್ಷತಾ ಕಾಯ್ದೆಯಂತೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಹಣ ಭರಿಸಲಿದೆ. ಎಲ್ಲ ಯೋಜನೆಗೂ ಪಡಿತರ ಚೀಟಿ ಬೇಡಿಕೆ ಇರುವ ಕಾರಣಕ್ಕೆ ಕಾರ್ಡ್‌ಗಳು ಹೆಚ್ಚುತ್ತಿವೆ ಎಂದು ವಿವರಿಸಿದರು.
53855 ಹೊಸ ಕಾರ್ಡ್ ನೀಡಲಾಗಿದ್ದು ಪ್ರತಿ ತಿಂಗಳು ಒಟ್ಟು ಪಡಿತರದಾರರಿಗೆ ಡಿಬಿಟಿ ಮೂಲಕ 2.95 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ತಾಂತ್ರಿಕ ಕಾರಣಕ್ಕೆ 8381 ಜನರ ಖಾತೆಗೆ ಹಣ ತಲುಪಿಲ್ಲ ಎಂದು ತಿಳಿಸಿದರು.
ಗೃಹಲಕ್ಷ್ಮಿಯಡಿ 3.66 ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದು 3.58 ಲಕ್ಷ ಮಹಿಳೆಯರಿಗೆ ಜೂನ್ ಅಂತ್ಯದವರೆಗೆ 751 ಕೋಟಿ ರೂ. ಪಾವತಿಸಲಾಗಿದೆ. 622 ಜಿಎಸ್‌ಟಿ ಪಾವತಿದಾರರಿದ್ದಾರೆ. 823 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಇತರೆ ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ರಾಜಾನಾಯ್ಕ ತಿಳಿಸಿದರು. ಯೋಜನೆ ಕುರಿತು ಮತ್ತೊಮ್ಮೆ ಅಭಿಯಾನ ನಡೆಸಬೇಕೆಂದು ಸಿಇಒ ಹೇಳಿದರು.
ಗೃಹಜ್ಯೋತಿ ಯೋಜನೆಯಡಿ 4,33,758 ಫಲಾನುಭವಿಗಳಿದ್ದು, ಬಳಸಲಾದ ವಿದ್ಯುತ್ ಸಂಬಂಧ ಜಿಲ್ಲೆಗೆ 25.83 ಕೋಟಿ ರೂ. ಬರಬೇಕಿದ್ದು, 19.26 ಕೋಟಿ ರೂ. ಜಮೆಯಾಗಿದೆ ಎಂದರು. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಓವರ್‌ಲೋಡ್ ಆಗುತ್ತಿದ್ದು ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. 63 ಕೆವಿ ಸಾಮರ್ಥ್ಯವನ್ನು 100 ಕೆವಿಗೆ ವಿಸ್ತರಿಸಬೇಕೆಂದು ರಾಘವೇಂದ್ರಗೌಡ ಕೋರಿದರು.
ಶಕ್ತಿ ಯೋಜನೆಯಡಿ ಒಟ್ಟು 4.69 ಕೋಟಿ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, 127 ಕೋಟಿ ರೂ. ಮೊತ್ತದ ಟಿಕೆಟ್ ದರವಿದೆ. 196 ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕವಿಲ್ಲ ಎಂದು ಕೆಎಸ್‌ಆರ್‌ಟಿಸಿ ಜಿಲ್ಲಾ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ತಿಳಿಸಿದರು. ಸಂತೆಬೆನ್ನೂರು, ಭದ್ರಾವತಿ, ನ್ಯಾಮತಿ ಇತರೆಡೆ ಬಸ್ ಸೌಕರ್ಯ ಒದಗಿಸುವಂತೆ ಶಿವರಾಂ ನಾಯಕ್ ಇತರರು ಮನವಿ ಮಾಡಿದರು.
ಯುವನಿಧಿ ಯೋಜನೆಯಲ್ಲಿ 12243 ಪದವೀಧರರು, 147 ಡಿಪ್ಲಮೋ ಫಲಾನುಭವಿಗಳು ನೊಂದಣಿಯಾಗಿದ್ದು 3.69 ಕೋಟಿ ರೂ. ಪಾವತಿಯಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದರು. ನೋಂದಣಿ ಪ್ರಮಾಣ ಹೆಚ್ಚಿಸಬೇಕೆಂದು ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ನಂಜಾನಾಯ್ಕ, ಕೆ.ಎನ್.ಮಂಜುನಾಥ್, ಸದಸ್ಯರಾದ ಎಸ್.ಎಸ್. ಗಿರೀಶ್, ಶಶಿಕಲಾ ನಲ್ಕುದುರೆ, ಎನ್. ನೀಲಗಿರಿಯಪ್ಪ ಇತರರಿದ್ದರು.
---