ಜಿಲ್ಲೆ

ವಕ್ಫ್ ವಿಚಾರ ಸರ್ಕಾರದ ನಾಟಕ ಎಂ.ಪಿ. ರೇಣುಕಾಚಾರ್ಯ ಕಿಡಿ

ಡಿ. ಎಂ. ಮಹೇಶ್

ದಾವಣಗೆರೆ: ಚಿಕ್ಕಬಳ್ಳಾಪುರ ಜಿಲ್ಲೆಯ ತಿಮ್ಮಸಂದ್ರ ಗ್ರಾಮದಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆ, ಟ್ರಾೃಕ್ಟರ್ ಜಫ್ತು ಪ್ರಕರಣ, ವಕ್ಫ್ ಮಂಡಳಿ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ನಾಟಕವನ್ನು ಬಯಲು ಮಾಡಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ರೈತರಿಗೆ ನೋಟಿಸ್ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಮೌಖಿಕ ಹೇಳಿಕೆ ಉಪಚುನಾವಣೆಗೆ ಸೀಮಿತವಾಗಿತ್ತು. ತಿಮ್ಮಸಂದ್ರ ಘಟನೆ ಬಳಿಕ ಅವರು ರೈತರ ಪರವೋ, ಹಿಂದುಗಳ ಪರವೋ ಅಥವಾ ಅಲ್ಪಸಂಖ್ಯಾತರ ಪರವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಜಮೀರ್ ನಡವಳಿಕೆಗೆ ಖಂಡನೆ ವ್ಯಕ್ತವಾಗಿದೆ. ಕಿಮ್ಮಸಂದ್ರದ ಸ್ಥಳದಲ್ಲಿ ರೈತರು ಉಳುಮೆ ಮಾಡದಂತೆ ಪೊಲೀಸರು ದಬ್ಬಾಳಿಕೆ ಮಾಡಿ, ವಕ್ಫ್ ಮಂಡಳಿಗೆ ಸಹಾಯ ಮಾಡಿದ್ದಾರೆ. ಇದು ತಾಲಿಬಾನ್ ಸರ್ಕಾರವೆ ಎಂಬ ಅನುಮಾನ ಮೂಡುತ್ತಿದೆ ಎಂದು ಟೀಕಿಸಿದರು.
ಕಂದಾಯ, ಕಾನೂನು ಸಚಿವರು ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದರು. ಇದು ಸಾಲದು. ಪಹಣಿಯ ಕಾಲಂ 11ರಲ್ಲಿ ವಕ್ಫ್ ಮಂಡಳಿ ಹೆಸರು ರದ್ದು ಪಡಿಸಬೇಕು ಹಾಗೂ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು. ತಿಮ್ಮಸಂದ್ರ ಘಟನೆ ಹಿನ್ನೆಲೆಯಲ್ಲಿ ದಬ್ಬಾಳಿಕೆ ನಡೆಸಿದ ಪೊಲೀಸರನ್ನು ಅಮಾನತುಪಡಿಸಬೇಕು. ವಶಪಡಿಸಿಕೊಂಡ ಟ್ರಾೃಕ್ಟರ್ ಮರಳಿಸಬೇಕು ಎಂದು ಆಗ್ರಹಿಸಿದರು.
ಜಮೀರ್ ಮಾತು, ನಡವಳಿಕೆ ಉಪಚುನಾವಣೆ ಮೇಲೆ ಪರಿಣಾಮ ಬೀರಿದೆ. ಇದನ್ನು ಮಾಗಡಿ ಶಾಸಕ ಬಾಲಕೃಷ್ಣ ಸಮ್ಮತಿಸಿದ್ದಾರೆ. ಸಿ.ಪಿ. ಯೋಗೇಶ್ವರ ಕೂಡ ಪರೋಕ್ಷ ಸೋಲು ಒಪ್ಪಿಕೊಂಡಿದ್ದಾರೆ. ಜಮೀರ್ ದುರ್ವರ್ತನೆ ವಿರುದ್ಧ ಸಚಿವರು, ಶಾಸಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಮೀರ್ ನಡೆ ಬದಲಾಗದಿದ್ದಲ್ಲಿ ಅವರಿಗೆ ಮುಂದಿನ ದಿನದಲ್ಲಿ ನಾವೇ ಹದ್ದುಬಸ್ತಿನಲ್ಲಿಡುತ್ತೇವೆ ಎಂದೂ ಎಚ್ಚರಿಕೆ ನೀಡಿದರು.
ಸಿದ್ದು ಗುಡುಗು ಹೈಕಮಾಂಡ್ ಮೇಲೆ!
ಮೂರೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಲಿದ್ದು ಸರ್ಕಾರ ಬದಲಾಗಲಿದೆ. ಸಿದ್ದರಾಮಯ್ಯ ಅವರ ಪರವಾಗಿ ಜನಾದೇಶ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅವರೇ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುತ್ತಾರೆ.
ಬಿಜೆಪಿಯು ಯಾವೊಬ್ಬ ಶಾಸಕರ ಖರೀದಿಗೆ ಪ್ರಯತ್ನ ನಡೆಸಿಲ್ಲ. ನನ್ನ ಮುಟ್ಟಿದರೆ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಗುಡುಗುತ್ತಿರುವುದು ಬಿಜೆಪಿ ವಿರುದ್ಧ ಅಲ್ಲ. ಕಾಂಗ್ರೆಸ್ ಹೈಕಮಾಂಡ್‌ಗೆ ಸಂದೇಶ ನೀಡಲು ಮಾಧ್ಯಮದ ಎದುರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದೂ ರೇಣುಕಾಚಾರ್ಯ ಹೇಳಿದರು. ಕರ್ನಾಟಕದಲ್ಲಿ ವಕ್ಫ್ ಮಂಡಳಿ ಅಗತ್ಯವಿಲ್ಲ. ಹಿಂದು ಮಠ, ಮಂದಿರಗಳಂತೆ ವಕ್ಫ್ ಆಸ್ತಿಯನ್ನು ಹಂಚಿಕೆ ಮಾಡಬೇಕು ಎಂದೂ ಆಗ್ರಹಿಸಿದರು.
ರೈತರ ಆಸ್ತಿ ಕಬಳಿಸುತ್ತಿರುವ ವಕ್ಫ್  ಮಂಡಳಿ ವಿರುದ್ಧ ವಿಜಯೇಂದ್ರ ನೇತೃತ್ವದ ಮೂರೂ ತಂಡಗಳು ರಾಜ್ಯವ್ಯಾಪಿ ಪ್ರವಾಸ ಮಾಡಲಿವೆ. ಬೆಳಗಾವಿ ಅಧಿವೇಶನದಲ್ಲಿ ದೊಡ್ಡ ಹೋರಾಟ ನಡೆಯಲಿದೆ ಎಂದು ಹೇಳಿದರು.
ಪರ್ಯಾಯ ನಾಯಕತ್ವ ಅಸಾಧ್ಯ
ಯತ್ನಾಳ್ ಪ್ರತ್ಯೇಕ ಪ್ರವಾಸ ಮಾಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಂಪಿಆರ್, ಬಿಜೆಪಿ ಸಂಘಟನೆ ವಿಚಾರದಲ್ಲಿ ರಾಜ್ಯಾಧ್ಯಕ್ಷರೇ ಸುಪ್ರೀಂ. ಅವರು ರಾಜ್ಯಾಧ್ಯಕ್ಷರಾದ ನಂತರ ಪಕ್ಷಕ್ಕೆ ಹೊಸ ಶಕ್ತಿ ಬಂದಿದೆ. ಅವರ ಸಾರಥ್ಯದಲ್ಲಿ ಅನೇಕ ಭ್ರಷ್ಟಾಚಾರ ವಿರುದ್ಧ ಪ್ರಕರಣಗಳಲ್ಲಿ ಹೋರಾಟ ಯಶಸ್ವಿಯಾಗಿದೆ.
ಮೈಸೂರು ಪಾದಯಾತ್ರೆ ವಿಫಲಗೊಳಿಸಲು ಯತ್ನಾಳ್ ಯಾರ ಜತೆ ಕೈಜೋಡಿಸಿದ್ದರು. ವಿಜಯೇಂದ್ರ ಅವರ ರಾಜಕೀಯ ಬೆಳವಣಿಗೆ ಸಹಿಸಲು ಕೆಲವರಿಗೆ ಸಾಧ್ಯವಾಗಿಲ್ಲ. ಅವರ ವಿರುದ್ಧವೇ ಕೆಲವರು ಪ್ರತ್ಯೇಕ ಸಭೆ, ಕಾರ್ಯಕ್ರಮ ನಡೆಸುವುದನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಪರ್ಯಾಯ ನಾಯಕತ್ವ ಸೃಷ್ಟಿಸಲು ಸಾಧ್ಯವಿಲ್ಲ. ಪ್ರತ್ಯೇಕ ಸಭೆ ನಡೆಸುವುದು ಮುಂದುವರಿದಲ್ಲಿ ನಾವೂ ಸಹ ಕೇಂದ್ರದ ವರಿಷ್ಠರಿಗೆ ದೂರು ನೀಡಲಿದ್ದೇವೆ ಎಂದೂ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರವಿ ಜಾಧವ್, ರಾಜು ವೀರಣ್ಣ, ಜಯರುದ್ರೇಶ್, ಮಂಜುನಾಥ, ಧರ್ಮರಾಜ್ ಇದ್ದರು.
---