ದಾವಣಗೆರೆ: ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ಮಾನದಂಡ ತಿದ್ದುಪಡಿ ಮಾಡಿ ಬೆಳೆನಷ್ಟದ ಸಂಪೂರ್ಣ ಹಣ ನೀಡಬೇಕು. ಇಲ್ಲವೇ ಬರ, ಅತಿವೃಷ್ಟಿ ಹಾನಿ ಹಿನ್ನೆಲೆಯಲ್ಲಿ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡುವ ನೀತಿ ಜಾರಿಗೊಳಿಸಬೇಕೆಂದು ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಆಗ್ರಹಿಸಿದರು.
ಕೇಂದ್ರದ ಬರ ಪರಿಹಾರದ ಮಾನದಂಡವೇ ಸರಿಯಾಗಿಲ್ಲ. ಒಣಭೂಮಿ ಪ್ರದೇಶದಲ್ಲಿ ಒಂದು ಎಕರೆ ಬೆಳೆಹಾನಿಗೆ 3,500 ರೂ.ಗಳನ್ನು ಭಿಕ್ಷೆ ರೂಪದಲ್ಲಿ ನೀಡಲಾಗುತ್ತಿದೆ. ಉಭಯ ಸರ್ಕಾರಗಳಿಗೆ ರೈತರ ಕಾಳಜಿಯಿದ್ದಲ್ಲಿ ಕೂಡಲೇ ಬರ ಪರಿಹಾರ ನೀತಿ ಬದಲಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬರ ಮತ್ತು ಅತಿ ಮಳೆಯಿಂದ ಹಾನಿಗೊಳಗಾದ ಬೆಳೆಗೆ ಸಂಪೂರ್ಣ ಪರಿಹಾರ ನೀಡಬೇಕು. ಇಲ್ಲವೇ ವಿಮೆ ಜಾರಿ ಮಾಡಬೇಕು. ಪರಿಹಾರ ಎಂಬ ಕಪಟ ನಾಟಕ ನಿಲ್ಲಿಸಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹಧನದ 750 ಕೋಟಿ ರೂ. ಕಳೆದ 8 ತಿಂಗಳಿಂದ ಬಿಡುಗಡೆಯಾಗಿಲ್ಲ. ಕೂಡಲೇ ಬಿಡುಗಡೆ ಮಾಡಿ ರೈತರನ್ನು ರಕ್ಷಿಸಬೇಕು. ಪಶುಗಳ ಹಿಂಡಿ, ಆಹಾರದ ಬೆಲೆ ದುಬಾರಿಯಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ ಎಂದರು.
ರಾಜ್ಯದಲ್ಲಿ ಶೇ. 30ರಷ್ಟು ಕಬ್ಬು ಬೆಳೆ ಒಣಗಿದ್ದು, ಉತ್ಪಾದನೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬರ ಪರಿಹಾರ ನಷ್ಟದಲ್ಲಿ ಕಬ್ಬನ್ನೂ ಪರಿಗಣಿಸಬೇಕು. ಕೃಷಿ ಚಟುವಟಿಕೆ ಆರಂಭಿಸಲು ಗುಣಮಟ್ಟದ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಗೆ ಕೃಷಿ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಆರ್. ಮಾಧವರೆಡ್ಡಿ ಕರೂರು ಮಾತನಾಡಿ, ವಿವಿಧ ಯೋಜನೆಯಡಿ ನೀಡುವ ಸಹಾಯಧನವನ್ನು ಸಾಲಕ್ಕೆ ಕಡಿತ ಮಾಡುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಮೌಖಿಕ ಹೇಳಿಕೆ ಆದೇಶ ರೂಪದಲ್ಲಿ ಬರಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯಾಪ್ತಿಯಲ್ಲಿ 54 ಲಕ್ಷ ರೈತರು ಸಾಲ ಹೊಂದಿದ್ದಾರೆ. ಒಂದು ಬಾರಿ ತೀರುವಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ನಡೆಸಿದ ಹೋರಾಟದ ಫಲವಾಗಿ ಜೂ. 1 ರಿಂದ ಒಟಿಎಸ್ ಜಾರಿಗೊಳಿಸುವ ಬಗ್ಗೆ ತಿಳಿಸಲಾಗಿದೆ. ರೈತರಿಗೆ ಅನಾನುಕೂಲ ಆಗುವಂತೆ ಒಟಿಎಸ್ ಜಾರಿಯಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಸಂಚಾಲಕ ಬಲ್ಲೂರು ರವಿಕುಮಾರ್ ಮಾತನಾಡಿ ಭದ್ರಾ ನೀರು ಬಿಡುವ ಹುಸಿ ಹೇಳಿಕೆಯಿಂದಾಗಿ ದಾವಣಗೆರೆ ಜಿಲ್ಲೆಯ 5 ಸಾವಿರ ಎಕರೆ ಕಬ್ಬುನಾಶವಾಗಿದೆ. ಮಾವು, ಪಪ್ಪಾಯ. ಇತರೆ ಬೆಳೆಗಳಲ್ಲದೆ ಅಕಾಲಿಕ ಮಳೆಯಿಂದ ಭತ್ತ ಸಹ ನಾಶವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮಳೆಯಾಶ್ರಿತ ಪ್ರದೇಶಗಳಿಗೆ ಮಾತ್ರ ಪರಿಹಾರ ನೀಡಿದೆ. ಪಂಪ್‌ಸೆಟ್ ಆಧರಿತ ಹಾಗೂ ಭದ್ರಾ ಕಾಲುವೆ ಆಧರಿತ ಬೆಳೆಗಳು ಹೆಚ್ಚುವರಿಯಾಗಿ ಬೆಳೆ ಹಾನಿಯಾಗಿದೆ. ಎಲ್ಲ ಬೆಳೆಗೂ ತಲಾ ಎಕರೆಗೆ ಪರಿಹಾರವಾಗಿ ಕನಿಷ್ಠ 30 ಸಾವಿರ ರೂಗಳನ್ನು ನೀಡಬೇಕು ಎಂದು ತಿಳಿಸಿದರು.
ಚೂನಪ್ಪ ಪೂಜಾರಿ ಮಾತನಾಡಿ ರಾಜ್ಯದಲ್ಲಿ 223 ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಣೆ ಮಾಡಿ 70 ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ ಮಾತ್ರ ಪರಿಹಾರ ನೀಡಿ ಇತರ ರೈತರನ್ನು ವಂಚಿಸಲಾಗಿದೆ ಎಂದು ಹೇಳಿದರು. ಮುಖಂಡರಾದ ರಾಂಪುರ ಬಸವರಾಜ್, ಸುರೇಶ್ ಪಾಟೀಲ್, ಶಿವಕುಮಾರ್, ಪೂಜಾರ್ ಅಂಜಿನಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು. ನಂತರ ಎಪಿಎಂಸಿ ಸಭಾಂಗಣದಲ್ಲಿ ರೖತ ಸಂಘದ ಸಭೆ ನಡೆಸಲಾಯಿತು.