ದಾವಣಗೆರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಲ್ಕನೇ ದರ್ಜೆ ರಾಜಕಾರಣಿ. ಬಾಯಿಚಟಕ್ಕೆ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ವಾಜಪೇಯಿ ಸಂಪುಟದಲ್ಲಿ ಸಚಿವನಾಗಿದ್ದೆ ಎಂದು ಯತ್ನಾಳ್ ಹೇಳಿಕೊಳ್ಳುತ್ತಲೇ ಅಪಮಾನ ಮಾಡುತ್ತಿದ್ದಾರೆ. ಯತ್ನಾಳ್ ಮಾತಿಗೆ ವಾಜಪೇಯಿ ಬದುಕಿದ್ದರೆ ನೊಂದುಕೊಳ್ಳುತ್ತಿದ್ದರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿ.ಎಸ್.ಯಡಿಯೂರಪ್ಪ ಸೈಕಲ್ ಹೊಡೆದು ಪಕ್ಷ ಕಟ್ಟಿದ್ದಾರೆ. ಅವರ ಬಗ್ಗೆ ಮಾತನಾಡಲು ಯತ್ನಾಳ್ ಅವರಿಗೆ ನೈತಿಕತೆ ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಮಾತನಾಡದಿದ್ದರೆ ಅವರಿಗೆ ಊಟ ಸೇರಲ್ಲ, ನಿದ್ದೆ ಬರಲ್ಲ ಎಂದು ಟೀಕಿಸಿದರು.
ಅಕ್ರಮ ನಡೆದಿಲ್ಲ:
ಕೋವಿಡ್ ಅವಧಿಯಲ್ಲಿ ಅಂದಿನ ಬಿಜೆಪಿ ಸರ್ಕಾರ ಜನರ ಜೀವ ಉಳಿಸುವ ಕೆಲಸ ಮಾಡಿದೆ. ಮಾಸ್ಕ್, ಬೆಡ್ ಹಾಗೂ ಇನ್ನಿತರ ಉಪಕರಣಗಳ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹ ಆಯೋಗದ ವರದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತಮಗೆ ಬೇಕಾದ ಅಂಶಗಳನ್ನು ಸೇರಿಸಿದ್ದಾರೆ ಎಂದು ಆರೋಪಿಸಿದರು.
ಎಸ್‌ಐಟಿ ಎಂಬುದು ಸಿದ್ದರಾಮಯ್ಯ/ ಶಿವಕುಮಾರ್ ಇನ್‌ವೆಸ್ಟಿಗೇಷನ್ ಟೀಂ ಆಗಿದೆ. ಸರ್ಕಾರ ಸಚಿವರು, ಶಾಸಕರಿಗೆ ಕ್ಲೀನ್‌ಚಿಟ್ ಕೊಡಿಸುವ ಕೆಲಸ ಮಾಡುತ್ತಿದೆ. ಮತಾಂಧ ಜಮೀರ್ ಅಹಮ್ಮದ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಸರ್ವನಾಶ ಆಗಲಿದೆ ಎಂದರು.
ಮುಖಂಡರಾದ ರಾಜುವೀರಣ್ಣ, ಪ್ರವೀಣ ಜಾಧವ್, ಮಂಜು (ಪಂಜು), ಕೆ.ಎನ್.ವೆಂಕಟೇಶ್, ಮಂಜುನಾಥ್, ಪ್ರಶಾಂತ್ ಇನ್ನಿತರರು ಇದ್ದರು.
---