ದಾವಣಗೆರೆ: ಇಳುವರಿ ಬಾರದೆ ಸಾಲ ಬಾಧೆ ಹಿನ್ನೆಲೆಯಲ್ಲಿ ಬೇಸತ್ತು ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕಿನ ರೈತರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚನ್ನಗಿರಿ ತಾಲೂಕು ಹೊನ್ನೆಬಾಗಿ ಗ್ರಾಮದ ರೈತ ಟಿ.ಕುಮಾರಪ್ಪ (45) ಜಮೀನಿನಲ್ಲಿ ಕೊರೆಯಿಸಿದ ನಾಲ್ಕು ಕೊಳವೆಬಾವಿಗಳಲ್ಲೂ ನಿರೀಕ್ಷಿತ ಪ್ರಮಾಣದ ನೀರು ಬಾರದೆ ಹಾಕಿದ್ದ ಬೆಳೆ ಕೈಗೆ ಸಿಗಲಿಲ್ಲ. ಸಹಕಾರ ಸಂಘ, ಖಾಸಗಿ ಬ್ಯಾಂಕ್‌ಗಳಲ್ಲಿ ಮಾಡಿದ್ದ ಸಾಲ ತೀರಿಸುವ ಬಗೆ ತೋಚದೆ ಆ.27ರಂದು ವಿಷ ಸೇವಿಸಿ ಮನೆಗೆ ಮರಳಿದ್ದರು.
ಮನೆಯವರು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಕುಮಾರಪ್ಪ ಚಿಕಿತ್ಸೆ ಫಲಕಾರಿಯಾಗದೆ ಆ.27ರಂದು ರಾತ್ರಿ ಮೃತಪಟ್ಟಿದ್ದು ಚನ್ನಗಿರಿ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದ ಹನುಮಂತನಾಯ್ಕ (45) ಕಳೆದ 3 ವರ್ಷದಿಂದ ಮೆಕ್ಕೆಜೋಳ ನಿರೀಕ್ಷಿತ ಇಳುವರಿಯಾಗದೆ ಸಾಲ ತೀರಿಸಲಾಗದೆ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದು ಎಕರೆ ಜಮೀನಿನಲ್ಲಿ ವರ್ಷದ ಹಿಂದೆ ಅಡಕೆ ಗಿಡಗಳನ್ನು ಕಟ್ಟಿದ್ದ ಹನುಮಂತನಾಯ್ಕ ಅರ್ಧ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಸಾಸ್ವೆಹಳ್ಳಿ ಸಹಕಾ ಸಂಘ ಹಾಗೂ ಗ್ರಾಮದ ಸಂಘ-ಸಂಸ್ಥೆಗಳಲ್ಲಿ ಮತ್ತು ಖಾಸಗಿ ಸಾಲ ಪಡೆದಿದ್ದರು. ವಿಷ ಸೇವಿಸಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನಿಸಲಾದರೂ ಬದುಕುಳಿಯಲಿಲ್ಲ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಪ್ರವಹಿಸಿ ರೈತನ ಸಾವು
ಹೊನ್ನಾಳಿ ತಾಲೂಕಿನ ಕೋನಾಯ್ಕನಹಳ್ಳಿಯ ಜಮೀನಿನಲ್ಲಿ ವಿದ್ಯುತ್ ಪ್ರವಹಿಸಿ ಕಲ್ಕೇರಿ ಗ್ರಾಮದ ರೈತ ನಾಗರಾಜ್ (38) ಬುಧವಾರ ಮೃತಪಟ್ಟಿದ್ದಾರೆ.
ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ್ ಚಾಲನೆ ಮಾಡಲು ಹೋದ ನಾಗರಾಜ್‌ಗೆ ಪೆನಲ್ ಬಾಕ್ಸ್‌ನ ವಿದ್ಯುತ್ ತಂತಿ ಸ್ಪರ್ಶಿಸಿ ಅಸ್ವಸ್ಥರಾಗಿ ಬಿದ್ದಿದ್ದು, ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.