ಜಿಲ್ಲೆ

ಬಗರ್‌ಹುಕುಂ ಹಕ್ಕುಪತ್ರಕ್ಕೆ ಆಗ್ರಹ ರೈತ ಸಂಘದಿಂದ ಪ್ರತಿಭಟನೆ

ಡಿ. ಎಂ. ಮಹೇಶ್

ದಾವಣಗೆರೆ: ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಅರಣ್ಯ ಭೂಮಿ ಸಾಗುವಳಿದಾರರ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಶೀಘ್ರ ಅರಣ್ಯ ಹಕ್ಕು ಸಮಿತಿ ಸಭೆ ಕರೆದು ಹಕ್ಕುಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಅಧಿನಿಯಮ 2006ಕ್ಕೆ 75 ವರ್ಷಗಳ ಸಾಕ್ಷಿ ದಾಖಲೆ ಇರುವ ಕಾನೂನನ್ನು 25 ವರ್ಷಗಳಿಗೆ ಇಳಿಸಬೇಕು. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಬಗರ್‌ಹುಕುಂ ಸಮಿತಿ ರಚಿಸಬೇಕು. ಪ್ರತಿ ವಾರಕ್ಕೊಮ್ಮೆ ಸಭೆ ಸೇರಿ ಎಲ್ಲ ಅರ್ಜಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಚನ್ನಗಿರಿ ತಾಲೂಕಿನ ಕಾಡಿನಲ್ಲಿ ಗೌಳಿ ಜನಾಂಗದವರು ನೂರಾರು ವರ್ಷಗಳಿಂದ ದನ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಇವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದ್ದಾರೆ. ಇವರಿಗೆ ಕಾಡಿನ ಅಂಚಿನ ಸರ್ಕಾರಿ ಜಮೀನಿನಲ್ಲಿ ಪುನರ್ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ನೂರಾರು ಮನೆಗಳು ಕುಸಿದಿವೆ. ಜಲಾವೃತಗೊಂಡು ಬೆಳೆ ಹಾನಿ ಸಂಭವಿಸಿವೆ. ಹೀಗಾಗಿ, ನಿರಾಶ್ರಿತರಿಗೆ ತಕ್ಷಣ ಮನೆ ನಿರ್ಮಿಸಿಕೊಡಬೇಕು. ಬೆಳೆಹಾನಿ ಪರಿಹಾರ ನೀಡಬೇಕು. ದಾವಣಗೆರೆಯಿಂದ ಪ್ರತಿದಿನ ಬೆಳಗ್ಗೆ 9ಕ್ಕೆ ಹಾಗೂ ಸಂಜೆ 4 ಗಂಟೆಗೆ ಕೈದಾಳೆ, ಗಿರಿಯಾಪುರ ಮಾರ್ಗವಾಗಿ ಲೋಕಿಕೆರೆಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು 45 ದಿನಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ, ನಿರಶನ ಸೇರಿ ಹಲವು ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಯಲೋದಹಳ್ಳಿ ರವಿಕುಮಾರ್, ಕಡರನಾಯಕನಹಳ್ಳಿ ಪ್ರಭುಗೌಡ, ಚಿರಂಜೀವಿ, ಹೂವಿನಮಡು ನಾಗರಾಜ, ಅಸ್ತ್ತಾಪನಹಳ್ಳಿ ಗಂಡುಗಲಿ ಇತರರು ಭಾಗವಹಿಸಿದ್ದರು.