ದಾವಣಗೆರೆ: ಜಿಲ್ಲೆಯಲ್ಲಿ ಕೇವಲ ಶೇ. 12ರಷ್ಟು ಅರಣ್ಯ ಭೂ ಪ್ರದೇಶವಿದ್ದು ಅದನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಸಿರೀಕರಣ ಯೋಜನೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ ಬಿ. ಇಟ್ನಾಳ್ ತಿಳಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಮೆ.ಕಾರ್ಗಿಲ್ ಇಂಡಿಯಾ ಪ್ರೈ.ಲಿ. ಬೆಳ್ಳೂಡಿ ಅವರ ಸಹಯೋಗದೊಂದಿಗೆ ನಗರದ ತುಂಗಭದ್ರಾ ಬಡಾವಣೆ ಭಾಗ-1, ಕೆ.ಎಚ್.ಬಿ ಕಾಲನಿ ಎದುರುಗಡೆ ಗುರುವಾರ, ಎರಡನೇ ಹಂತದ ವನಮಹೋತ್ಸವದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನದಂಡದ ಪ್ರಕಾರ ಶೇ. 33ರಷ್ಟು ಅರಣ್ಯ ಪ್ರದೇಶ ಇರಬೇಕು.
ಇದಕ್ಕಾಗಿ ಪ್ರಸಕ್ತ ವರ್ಷ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ 6.4 ಲಕ್ಷ ಸಸಿಗಳನ್ನು ಬೆಳೆಸಿ, 4 ಕಡೆ ಮಿಯಾವಾಕಿ ಅರಣ್ಯ ನಿರ್ಮಿಸಿ, ಅವುಗಳ ನಿರ್ವಹಣೆಗೂ ಅನುದಾನ ನೀಡಲಾಗಿದೆ ಎಂದರು.
ಗಿಡಗಳನ್ನು ನೆಡಲು ಅನುದಾನ
ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮೀಣ ಭಾಗದಲ್ಲಿ ಮಾತ್ರ ಗಿಡಗಳನ್ನು ನೆಡಲು ಅನುದಾನ ಬಿಡುಗಡೆಯಾಗುತ್ತಿದ್ದು ನಗರ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ.
ಈಗಾಗಲೇ ಗೋಮಾಳಗಳ ಅಭಿವೃದ್ಧಿ, ರಸ್ತೆ ಬದಿಗಳಲ್ಲಿ ಗಿಡ ನೆಡುವುದು ಹಾಗೂ ಶಾಲಾ ಮೈದಾನಗಳಲ್ಲಿ ಗಾರ್ಡನ್‌ಗಳನ್ನು ಕೂಡ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಮಾನವನ ಅಭಿವೃದ್ಧಿಯ ಹಂಬಲದಿಂದ ಪರಿಸರದ ಮೇಲೆ ದುಷ್ಪರಿಣಾಮಗಳಾಗುತ್ತಿವೆ. ಇದನ್ನು ತಡೆಗಟ್ಟಲು ಅರಣ್ಯ ಪ್ರದೇಶ ಹೆಚ್ಚಿಸಲು ಗಿಡಗಳನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಪರಿಸರ ನಾಶ
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿ, ನಗರದಲ್ಲಿ ಒಂದು ಕಾಲದಲ್ಲಿ ಮನೆಗಳಿಗಿಂತ ಮರಗಳೇ ಹೆಚ್ಚು ಕಾಣುತ್ತಿದ್ದವು. ನಂತರ ಅಭಿವೃದ್ಧಿಯ ಹೆಸರಿನಲ್ಲಿ ಮನೆ, ಬಡಾವಣೆ, ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಾಗಿ ಪರಿಸರ ನಾಶವಾಗುತ್ತಿದೆ.
ಎಲ್ಲರೂ ಕೈ ಜೋಡಿಸಿ, ಮನೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು ಬೆಳೆಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ದಾವಣಗೆರೆಯನ್ನು ಹಸಿರು ನಗರವನ್ನಾಗಿಸಲು ಸಾಧ್ಯ ಎಂದರು.
ಚಿತ್ರದುರ್ಗದ ಹಿರಿಯ ಪರಿಸರ ಅಧಿಕಾರಿ ರಮೇಶ ಡಿ. ನಾಯಕ್, ಜಿಲ್ಲಾ ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮೀಕಾಂತ, ಮೆ.ಕಾರ್ಗಿಲ್ ಇಂಡಿಯಾ ಪ್ರೈ.ಲಿ ಬೆಳ್ಳೂಡಿ ಯುಟಿಲಿಟಿ ಮ್ಯಾನೇಜರ್ ವೆಂಕಟೇಶ್ ಭಟ್, ಡಿ.ಎಸ್.ಒ ಮಂಜುನಾಥ್ ಇದ್ದರು.