ಜಿಲ್ಲೆ

ಗುಣಮಟ್ಟದ ವಿದ್ಯುತ್‌ಗೆ ಒತ್ತಾಯ ಬೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

ಡಿ. ಎಂ. ಮಹೇಶ್

ದಾವಣಗೆರೆ: ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮಲ್ಲಶೆಟ್ಟಿಹಳ್ಳಿ ಹಾಗೂ ಕರಿಲಕ್ಕೇನಹಳ್ಳಿ ವ್ಯಾಪ್ತಿಯ ರೈತರು ರೈತ ಸಂಘ ಹಸಿರುಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾ ಘಟಕದ ನೇತೃತ್ವದಲ್ಲಿ ಮಂಗಳವಾರ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತರಿಗೆ ನೀಡುವ 7 ತಾಸು ವಿದ್ಯುತ್‌ನ ವೋಲ್ಟೇಜ್ ಪ್ರಮಾಣ 150ರಿಂದ 160ರಷ್ಟು ಇರಲಿದೆ. ಇದರಲ್ಲಿ ಪಂಪ್‌ಸೆಟ್ ಮೋಟರ್‌ಗಳು ಕಾರ್ಯ ನಿರ್ವಹಿಸದೆ ಸಮಸ್ಯೆಯಾಗಿದೆ. ಬೆಳೆಗಳಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ಇತ್ತ ಮೋಟರ್ ಸುಟ್ಟುಹೋಗುತ್ತಿವೆ. ಸಮರ್ಪಕ ವಿದ್ಯುತ್ ಸರಬರಾಜು ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಕಿಡಿ ಕಾಡಿದರು.

ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸಿ 400 ವೋಲ್ಟ್‌ನ ವಿದ್ಯುತ್ ಪೂರೈಸಬೇಕು. ಇಲ್ಲವಾದಲ್ಲಿ ಇದೇ ಸ್ಥಳದಲ್ಲಿ ಅಡುಗೆ ತಯಾರಿಸಿಕೊಂಡು ಜೀವನ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸ್.ಕೆ. ಪಾಟೀಲ್ ರೈತರನ್ನು ಸಮಾಧಾನ ಪಡಿಸಿದರು. ರೈತರ ಬೇಡಿಕೆಯಂತೆ ಗುಣಮಟ್ಟದ ವಿದ್ಯುತ್ ನೀಡುವುದಾಗಿ ಲಿಖಿತ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಪದಾಧಿಕಾರಿಗಳಾದ ದೇವರಹಳ್ಳಿ ಶಂಕರ್, ದೇವರಹಳ್ಳಿ ರಂಗನಾಥ್, ಶ್ರೀನಿವಾಸ್, ಜಕ್ಲಿ ನಾಗರಾಜ್, ಕೆಂಪನಹಳ್ಳಿ ಗಣೇಶ್, ಆಲೂರು ಸಿದ್ದೇಶ್, ಮಲ್ಲಶೆಟ್ಟಿಹಳ್ಳಿ ಕರಿಬಸಪ್ಪ, ಪರಮೇಶ್, ಎಂ.ಎಸ್. ಬಸವರಾಜಪ್ಪ, ಎಂ. ಸಿದ್ದೇಶ್ ಇತರರು ಪಾಲ್ಗೊಂಡಿದ್ದರು.