ಜಿಲ್ಲೆ

ಸಾಲದ ಬಾಬ್ತಿಗೆ ಸಬ್ಸಿಡಿ ಹಣ ಜಮೆಗೆ ವಿರೋಧ   ರೈತ ಸಂಘದ ಪ್ರತಿಭಟನೆ

ಡಿ. ಎಂ. ಮಹೇಶ್

ದಾವಣಗೆರೆ: ಸಾಮಾಜಿಕ ಭದ್ರತೆ ಹಾಗೂ ವಿವಿಧ ಸಬ್ಸಿಡಿ ಹಣವನ್ನು ರೈತ ಮಹಿಳೆಯೊಬ್ಬರ ಸಾಲ ತೀರುವಳಿಗೆ ಜಮೆ ಮಾಡಿಕೊಂಡಿದ್ದ ಆನಗೋಡು ಗ್ರಾಮದ  ಖಾಸಗಿ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ರಾಜ್ಯ ರೈತ ಸಂಘ, ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ದಾವಣಗೆರೆ ತಾಲೂಕು ಹೊನ್ನೂರು ಗ್ರಾಮದ ನಾಗಮ್ಮ ರಮೇಶ್ ಎಂಬುವರು  ಅಂಗವಿಕಲರ ಕಲ್ಯಾಣ ಇಲಾಖೆಯಿಂದ 35 ಸಾವಿರ ರೂ. ಸಹಾಯಧನ, 65 ಸಾವಿರ ರೂ. ಸಾಲ ಸೇರಿದಂತೆ 1 ಲಕ್ಷ ರೂ. ಸಾಲ ಪಡೆದಿದ್ದರು. ಇದರಲ್ಲಿ 50 ಸಾವಿರ ರೂ. ಮರುಪಾವತಿ ಮಾಡಿದ್ದಾರೆ. ಉಳಿದ 15 ಸಾವಿರ  ಹಣವನ್ನು ಕಟ್ಟದಿರುವ ಹಿನ್ನೆಲೆಯಲ್ಲಿ ಅವರ ಖಾತೆಯಲ್ಲಿದ್ದ ಉದ್ಯೋಗ ಖಾತ್ರಿ, ಗೃಹ ಲಕ್ಷ್ಮೀ, ಅಂಗವಿಕಲರ ವೇತನ ಹಾಗೂ ಇತರೆ ಸಬ್ಸಿಡಿ ಹಣವನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ. ಸಾಲ ಕಟ್ಟುವುದಾಗಿ ತಿಳಿಸಿದರೂ ಬ್ಯಾಂಕ್ ವ್ಯವಸ್ಥಾಪಕರು ಸ್ಪಂದಿಸಿಲ್ಲ  ಎಂದರು.
ಸಾಲದ ಖಾತೆಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ನೀಡುವ ಗೃಹಲಕ್ಷ್ಮಿ, ಅಂಗವಿಕಲರ ವೇತನ, ಇತರೆ ಸರ್ಕಾರಿ ಸಬ್ಸಿಡಿ ಹಣವನ್ನು ಯಾವುದೇ ಕಾರಣಕ್ಕೂ  ಜಮೆ ಮಾಡಿಕೊಳ್ಳದಿರಲು ಸರ್ಕಾರದ ಆದೇಶವಿದೆ. ಆದರೂ ವ್ಯವಸ್ಥಾಪಕರು ಇದನ್ನು ಪಾಲಿಸದೇ ರೈತವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ದೂರಿದರು.
ಧರಣಿ ಸ್ಥಳಕ್ಕೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಕರೆಸಿಕೊಂಡ ತಹಸೀಲ್ದಾರ್ ಡಾ.ಎಂ. ಅಶ್ವಥ್ ಅವರು, ಮುಟ್ಟುಗೋಲು ಹಾಕಿಕೊಳ್ಳಲಾದ ಹಣವನ್ನು ನಾಗಮ್ಮ ಅವರ ಖಾತೆಗೆ ಮರುಜಮೆ ಮಾಡುವಂತೆ ತಾಕೀತು ಮಾಡಿದರು.
ಆದರೆ ಪ್ರತಿಭಟನಾಕಾರರು ವಿರೋಧಿಸಿದರು. ಬ್ಯಾಂಕ್ ವ್ಯವಸ್ಥಾಪಕರು ಪ್ರಬಂಧಕರು ಧರಣಿ ಸ್ಥಳಕ್ಕೆ ಬಂದು ತಹಸೀಲ್ದಾರ್ ಸಮ್ಮುಖದಲ್ಲೇ ಹಣ ನೀಡುವಂತೆ ಪಟ್ಟು ಹಿಡಿದಾಗ 35 ಸಾವಿರ ರೂ. ನೆರವನ್ನು ನಾಗಮ್ಮ ಅವರಿಗೆ ನೀಡಿದರು.
ಸಾಮಾಜಿಕ ಭದ್ರತೆ ಸೇರಿ ಯಾವುದೇ ಬಗೆಯ ಯೋಜನೆ ಅಥವಾ ಸಬ್ಸಿಡಿ ಹಣವನ್ನು ಸಾಲದ ಖಾತೆಗೆ ಜಮೆ ಮಾಡದಂತೆ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಂತೆ ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಪ್ರತಿಭಟನೆಯಲ್ಲಿ ನಾಗಮ್ಮ ರಮೇಶ್, ಆಲೂರು ಪರಶುರಾಂ, ಗಂಡುಗಲಿ, ಯರವನಾಗತಿಹಳ್ಳಿ ಪೂಜಾರ್ ಪರಮೇಶ್ವರಪ್ಪ, ಗುಮ್ಮನೂರು ರುದ್ರೇಶ್, ಭೀಮೇಶ್, ಶಿವಪುರ ಕೃಷ್ಣಮೂರ್ತಿ, ಚಿಕ್ಕಮಲ್ಲನಹೊಳೆ ಚಿರಂಜೀವಿ ಅನೇಕರು ಭಾಗವಹಿಸಿದ್ದರು.
--