ಜಿಲ್ಲೆ

ಮಧ್ಯಂತರ ಪರಿಹಾರಕ್ಕೆ ಆಗ್ರಹ ಶೀಘ್ರವೇ ರಾಜಧಾನಿಗೆ ಜಾಥಾ, ವಿಧಾನಸೌಧ ಮುತ್ತಿಗೆ

ದಾವಣಗೆರೆ: ರಾಜ್ಯ ಸರ್ಕಾರ ಜಾರಿಗೊಳಿಸಿದ 7ನೇ ವೇತನ ಆಯೋಗದಡಿ ನಿವೃತ್ತ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಕರ್ನಾಟಕ ನಿವೃತ್ತ ನೌಕರರ ವೇದಿಕೆಯು ವಿವಿಧ ಸೇವಾ ಸೌಲಭ್ಯಗಳಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್ ಸಭೆ ನಡೆಸಿ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದೆ.
ಪರಿಷ್ಕೃತ ವೇತನಕ್ಕೆ ಅನುಗುಣವಾಗಿ ನಿವೃತ್ತಿ ಉಪಧನ, ಪಿಂಚಣಿ ಮತ್ತು ಗಳಿಕೆ ರಜೆಯ ನಗದೀಕರಣದ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಬೆಳಗಾವಿಯಿಂದ ಬೆಂಗಳೂರುವರೆಗೆ ಜಾಥಾ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಇಲ್ಲಿನ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ, ಸಂಘದ ರಾಜ್ಯ ಮಟ್ಟದ ಕಾರ್ಯಕಾರಿಣಿಯಲ್ಲಿ ನಿಶ್ಚಯಿಸಲಾಯಿತು.
ಸಭೆಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ, ಆ.1ರಿಂದ ನೌಕರರಿಗೆ ಏಳನೇ ವೇತನ ಆಯೋಗದ ವೇತನ ಶ್ರೇಣಿ ಲಾಭವನ್ನು ಒದಗಿಸುತ್ತಿದೆ. ಆದರೆ 2022ರ ಜುಲೈಗೆ ಪೂರ್ವಾನ್ವಯವಾಗುವಂತೆ ವರದಿ ಶಿಫಾರಸನ್ನು ಪರಿಗಣಿಸಿಲ್ಲ. 2022ರ ಜುಲೈನಿಂದ 2024ರ ಜುಲೈವರೆಗೆ ನಿವೃತ್ತರಾದ ಹಾಗೂ ನಿಧನರಾದ ನೌಕರರಿಗೆ ಇದು ಅನ್ವಯಿಸದಿರುವುದು ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏಳನೇ ವೇತನ ಆಯೋಗದಲ್ಲಿ ಮಧ್ಯಂತರ ಪರಿಹಾರದ ಲೆಕ್ಕಾಚಾರ ಮಾಡದಿರುವ ಕಾರಣಕ್ಕೆ 25 ತಿಂಗಳ ಅವಧಿಯಲ್ಲಿ ನಿಧನರಾದ ಹಾಗೂ ನಿವೃತ್ತಿಯಾದ ನೌಕರರಿಗೆ ಆರ್ಥಿಕ ನಷ್ಟವಾಗಲಿದೆ. ನಿವೃತ್ತ ಉಪಧನ, ಪರಿವರ್ತಿತ ಪಿಂಚಣಿ ಮೌಲ್ಯ, ನಿವೃತ್ತಿ ನಂತರದ ಗಳಿಕೆ ರಜೆ ನಿಗದಿಕರಣ ಗಳನ್ನು ಆರನೇ ವೇತನ ಶ್ರೇಣಿಯ ಮೂಲ ವೇತನಕ್ಕೆ ಲೆಕ್ಕಾಚಾರ ಮಾಡಿ ಪಾವತಿಸುವುದು ಸರಿಯಲ್ಲ ಎಂದರು.
ಐದು ವರ್ಷಕ್ಕೊಮ್ಮೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗಬೇಕು. ಏಳನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರ ಏಳು ವರ್ಷಗಳ ಸುದೀರ್ಘ ಅಂತರ ತೆಗೆದುಕೊಂಡಿದೆ. ಸೇವಾ ಸೌಲಭ್ಯಗಳ ಮಧ್ಯಂತರ ಪರಿಹಾರ ನೀಡದಿರುವ ವಿಚಾರದ ಬಗ್ಗೆ ಶಾಸಕರು, ಸಂಸದರು ಮೌನ ಮುರಿಯುತ್ತಿಲ್ಲ ಎಂದು ಹೇಳಿದರು.
4ನೇ ವೇತನ ಆಯೋಗ ಜಾರಿ ಸಂದರ್ಭದಲ್ಲಿ (1993ರಲ್ಲಿ) ಅಂದಿನ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು ನಿವೃತ್ತರಿಗೂ ಸೌಲಭ್ಯ ವಿಸ್ತರಿಸಿದ್ದರು. ಈಗ ಅವರೇ ಸಿಎಂ ಸ್ಥಾನದಲ್ಲಿದ್ದು ಸಮಸ್ಯೆ ಇತ್ಯರ್ಥಪಡಿಸಲು ಕಷ್ಟವಾಗದು. ಮಧ್ಯಂತರ ಪರಿಹಾರವನ್ನು ಪರಿಗಣಿಸಿ ಲೆಕ್ಕಾಚಾರ ಮಾಡಿ ತಿದ್ದುಪಡಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸುವುದು, ಸರ್ಕಾರಿ ನೌಕರರ ಸಂಘ ಹಾಗೂ ನಿವೃತ್ತರ ಸಂಘದ ಬೆಂಬಲ ಪಡೆಯಲು ಹಾಗೂ ಅನಿವಾರ್ಯವಾದಲ್ಲಿ ಕಾನೂನು ಹೋರಾಟ ನಡೆಸಲೂ ಸಭೆ ಸಮ್ಮತಿಸಿತು. ಮಧ್ಯಂತರ ಪರಿಹಾರ ಕುರಿತಂತೆ ಸರ್ಕಾರದಿಂದ ಮರು ಆದೇಶ ಮಾಡಿಸಲು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಡಾ. ಭೈರಪ್ಪ ಅವರು ಬದ್ಧರಾಗಬೇಕೆಂದೂ ಸಭೆ ಮನವಿ ಮಾಡಿತು.
70 ವರ್ಷ ವಯೋಮಾನ ಮೀರಿದ ನೌಕರರ ವೇತನ ಶೇ 10ರಷ್ಟು ಏರಿಸಬೇಕು. ವೈದ್ಯಕೀಯ ಸೌಲಭ್ಯ ವಿಸ್ತರಿಸಬೇಕು ಎಂಬ ಆಯೋಗದ ಶಿಫಾರಸನ್ನು ಸರ್ಕಾರ ನಿರ್ಲಕ್ಷಿಸಿದೆ. ನಿವೃತ್ತಿ ಅಂಚಿನಲ್ಲಿರುವ ನೌಕರರು, ಅಧಿಕಾರಿಗಳಿಗೂ ಅನ್ಯಾಯವಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಹಾಗೂ ಸರ್ಕಾರಿ ನೌಕರರ ಸಂಘ ಗಂಭೀರವಾಗಿ ಆಲೋಚಿಸದಿದ್ದಲ್ಲಿ ಹೋರಾಟ ತೀವ್ರವಾಗಲಿದೆ ಎಂದೂ ಸಭೆ ಎಚ್ಚರಿಕೆ ಸಂದೇಶ ರವಾನಿಸಿತು.
ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಸಂಚಾಲಕರಾದ ಅಶೋಕ ಎಂ.ಸಜ್ಜನ, ಗುರು ತಿಗಡಿ, ಶಂಕರಪ್ಪ ಲಮಾಣಿ, ಎಸ್.ಜಿ.ಬೆಸೆರೊಟ್ಟಿ ಇದ್ದರು.