ಜಿಲ್ಲೆ

ವಿಧಾನಸಭಾ ಕ್ಷೇತ್ರಗಳಲ್ಲಿ 2 ಕೆರೆ ನಿರ್ಮಿಸಿ  ಶಾಸಕರಿಗೆ ಪರಿಸರ ಆಂದೋಲನ ಮನವಿ

ಡಿ. ಎಂ. ಮಹೇಶ್

ದಾವಣಗೆರೆ: ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ಕನಿಷ್ಠ 2 ಕೆರೆಗಳ ನಿರ್ಮಾಣಕ್ಕೆ ಶಾಸಕರು ಗಮನ ಹರಿಸಬೇಕು ಎಂದು ದಾವಣಗೆರೆ ಜಿಲ್ಲಾ ನೆಲಜಲ ಹಾಗೂ ಪರಿಸರ ಆಂದೋಲನ ಒಕ್ಕೂಟದ ಸಂಚಾಲಕ ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.
ಕೋಲಾರ ಜಿಲ್ಲೆಯಲ್ಲಿ 2 ಸಾವಿರ ಕೆರೆಗಳಿವೆ. ದಾವಣಗೆರೆ ಜಿಲ್ಲೆಯಲ್ಲಿ 538 ಕೆರೆಗಳಿವೆ. ಜಲ ಮೂಲಗಳನ್ನು ಹೆಚ್ಚಿಸಲು ಗಮನ ಹರಿಸುವ ಅಗತ್ಯವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.  
ಈ ವಿಚಾರವಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೂ ಸಹ ಕಂದಾಯ ಸಚಿವರಿಗೆ ಪತ್ರ ಬರೆದಿದ್ದಾರೆ. ಶಾಸಕ ಬಸವಂತಪ್ಪ ಕೂಡ ಬಸವಾಪಟ್ಟಣ ಹಾಗೂ ಮಾಯಕೊಂಡದಲ್ಲಿ ಕೆರೆಗಳನ್ನು ನಿರ್ಮಿಸಲು ಆಸಕ್ತಿ ವಹಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಗಾಲ ಸಂದರ್ಭದಲ್ಲಿ 243 ಕೆರೆಗಳು ಮಾತ್ರ ತುಂಬಿವೆ. ಕೆರೆಗಳ ಹೂಳು ತೆಗೆಯದೇ ಅಭಿವೃದ್ಧಿ ಪಡಿಸದ ಕಾರಣ ಉಳಿದ ಕೆರೆಗಳಿಗೆ ನೀರು ಬಂದಿಲ್ಲ. ಹಲವು ಕೆರೆಗಳು ಒಣಗಿ ಹೋಗಿವೆ. ಹಲವು ಒತ್ತುವರಿಯಾಗಿವೆ. ಕೆರೆಗಳನ್ನು ಉಳಿಸಬೇಕಿದೆ ಎಂದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ಟಿರುವ ಸಸಿಗಳನ್ನು ಸಂರಕ್ಷಿಸಬೇಕು. ಸಂಘ-ಸಂಸ್ಥೆಗಳು, ಇಲಾಖೆಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಬೇಕು. ವಾಯು ಮಾಲಿನ್ಯ ತಗ್ಗಿಸಲು ಸೈಕಲ್ ಹಾಗೂ ಎಲೆಕ್ಟ್ರಿಕ್ ಬೈಕ್‌ಗಳಿಗೆ ಉತ್ತೇಜನ ನೀಡಬೇಕು. ಪಾದಚಾರಿಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ ನೆಟ್ಟಿರುವ ಸಸಿಗಳು, ಉಳಿದಿರುವ ಸಸಿಗಳ ಬಗ್ಗೆ ಮಾಹಿತಿ ಕೇಳಲಾಗಿದೆ.  ಮಳೆ ನೀರು ಸಂಗ್ರಹ, ಸೈಕಲ್ ಬಳಸುವವರನ್ನು ಗುರುತಿಸಿ ಅವರೊಂದಿಗೆ ಜಿಲ್ಲಾಧಿಕಾರಿಗಳು ಚಹಾ ಕೂಟ ಏರ್ಪಡಿಸಿ ಉತ್ತೇಜಿಸಬೇಕು. ಹಿಂದೆ ಇಂತಹ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗುತ್ತಿತ್ತು ಎಂದು ಹೇಳಿದರು.
ಕಾಂಪೌಂಡ್ ಹಾಗೂ ಕೊಳವೆಬಾವಿ ಇರುವ ಶಾಲೆಗಳನ್ನು ಗುರುತಿಸಿ ಗಿಡಗಳನ್ನು ಬೆಳೆಸಲು ಉತ್ತೇಜಿಸಬೇಕು. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಜನರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಬೇಕು. ಪ್ರತಿ ಮನೆ ಆವರಣದಲ್ಲಿ ಕನಿಷ್ಠ 2 ಗಿಡಗಳನ್ನು ನೆಟ್ಟು ಪಾಲನೆ ಮಾಡಬೇಕೆಂದು  ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಒತ್ತಾಯಿಸಿದರು.
ಮುಖಂಡರಾದ ವಸಂತ್, ಕೊಟ್ರೇಶ್, ಚಂದ್ರಶೇಖರ್, ರಾಜಯೋಗಿ ಹೆಬ್ಬಾಳ್ ಇದ್ದರು.
--