ಜಿಲ್ಲೆ

ಶೈಕ್ಷಣಿಕ ಜಾಗೃತಿ ಮೂಡಿಸಲು ಪ್ರವಾಸ

ಡಿ. ಎಂ. ಮಹೇಶ್

ದಾವಣಗೆರೆ: ಬಡವರ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು. ಹೀಗಾಗಿ ಪ್ರವಾಸದ ಮೂಲಕ ಶೈಕ್ಷಣಿಕ ಜಾಗೃತಿ ಕೆಲಸ ಮಾಡುತ್ತಿದ್ದೇನೆ ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ್ ಹೇಳಿದರು.

ಹರಿಹರ ತಾಲೂಕು ಯಲವಟ್ಟಿಯ ಗುರು ಸಿದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ, ವೈರಾಗ್ಯನಿಧಿ ಶಿವಾನಂದ ಸ್ವಾಮಿಗಳ 20ನೇ ಹಾಗೂ ಜ್ಞಾನನಿಧಿ ಶ್ರೀ ನಿತ್ಯಾನಂದ ಸ್ವಾಮಿಗಳ 18ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಕ್ಕಳು ಅವಕಾಶಗಳಿಂದ ವಂಚಿತರಾಗದೆ ಉತ್ತಮ ಭವಿಷ್ಯ ಕಾಣಬೇಕು. ಹಾಗಾದಾಗ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನ ಸಾಗಿಸಬಹುದು ಎಂದರು.

ಶೈಕ್ಷಣಿಕ ಬದಲಾವಣೆಗಾಗಿ ರಾಜ್ಯ ಸುತ್ತಾಡುತ್ತಿದ್ದೇನೆ. ಗ್ರಾಮೀಣ ಶಾಲೆ-ಕಾಲೇಜುಗಳಿಗೆ ತೆರಳಿ ಶಿಕ್ಷಣದ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದು, ಮಠಗಳು, ಮಠಾಧೀಶರ ಆಶೀರ್ವಾದ, ಸಹಕಾರ ಬೇಕು ಎಂದು ಪ್ರತಿಪಾದಿಸಿದರು.

ಅನ್ನದಾನ, ವಿದ್ಯಾದಾನದ ಮೂಲಕ ಮಠಗಳು ಶೈಕ್ಷಣಿಕ ರಂಗದಲ್ಲಿ ಅಚ್ಚಳಿಯದ ಕೈಂಕರ್ಯ ಮಾಡಿವೆ. ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿವೆ. ನೈತಿಕತೆ, ಪ್ರಾಮಾಣಿಕತೆ ಉಳಿಯಬೇಕಾದರೆ ಮಠಗಳ ಜನಸೇವಾ ಕಾರ್ಯಕ್ರಮಗಳು ಹೆಚ್ಚಬೇಕು. ಅವು ಜನಮಾನಸದಲ್ಲಿ ಉಳಿದಾಗ ಮಾತ್ರ ಧರ್ಮ ರಕ್ಷಣೆಯಾಗಲಿದೆ ಎಂದರು.

ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಸಮಾಜ ಸೇವೆಯ ಕನಸು ಹೊತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧೆ ಮಾಡಿದ್ದೆ. ಜನರು ತೋರಿದ ಪ್ರೀತಿಗೆ ಚಿರಋಣಿ ಎಂದು ಹೇಳಿದರು.

ಚಿತ್ರದುರ್ಗದ ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆಯ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಹದಡಿ ಚಂದ್ರಗಿರಿ ಸಂಸ್ಥಾನ ಮಠದ ಶ್ರೀ ಮುರುಳೀಧರ ಸ್ವಾಮೀಜಿ, ಹೋತನಹಳ್ಳಿಯ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಸ್ವಾಮೀಜಿ, ಚಿತ್ರಭಾನುಕೋಟೆಯ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಹಾಗೂ ಇತರ ಮುಖಂಡರಿದ್ದರು.

----