ದಾವಣಗೆರೆ: ಸುಪ್ರೀಂಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿ ವ್ಯಾಪ್ತಿಯ ಉಪಜಾತಿಗಳಿಗೆ ಸಂವಿಧಾನಬದ್ಧ ಒಳಮೀಸಲು ನೀಡಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ತಮಟೆ ಚಳವಳಿ ನಡೆಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಮಟೆ ವಾದನದೊಂದಿಗೆ ಹೆಜ್ಜೆ ಹಾಕಿದ ಕಾರ್ಯಕರ್ತರು, ಮುಖಂಡರು, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲು ಕಲ್ಪಿಸಲು ಸಂವಿಧಾನಬದ್ಧ ಅಧಿಕಾರವಿದೆ. ಇದನ್ನು ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತರಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದು ದಸಂಸ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಸಿಜೆಐ ಡಿ. ವೈ. ಚಂದ್ರಚೂಡ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ವಿಚಾರದಲ್ಲಿದ್ದ ಗೊಂದಲವನ್ನು ಪರಿಹರಿಸಿದೆ ಎಂದು ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಹೇಳಿದರು.
ಒಳಮೀಸಲಾತಿ ಕಲ್ಪಿಸುವುದು ಬಹು ಕಷ್ಟದ ಕೆಲಸ. ಇದನ್ನು ನ್ಯಾಯಯುತವಾಗಿ ಮಾಡಬೇಕು. ಒಳ ಮೀಸಲಾತಿ ನೀಡಿಕೆಯು ಗಣನೀಯವಾದ ಮತ್ತು ಪ್ರಮಾಣೀಕರಿಸಬಹುದಾದ ದತ್ತಾಂಶಗಳ ಆಧಾರದಲ್ಲಿ ನಿರ್ಧಾರವಾಗಬೇಕು. ಇದು ಬಹುದೊಡ್ಡ ಸವಾಲಿನ ಕೆಲಸ.ಪರಿಶಿಷ್ಟ ಜಾತಿಗಳಲ್ಲಿ ನೂರಾರು ಉಪಜಾತಿಗಳಿವೆ.
ಒಪ್ಪಿತವಾದ ಮಾನದಂಡಗಳು ಮತ್ತು ವಿಧಾನಗಳ ಮೂಲಕ ತುಲನಾತ್ಮಕವಾಗಿ ಈ ಜಾತಿಗಳ ಹಿಂದುಳಿದಿರುವಿಕೆಯನ್ನು ನಿರ್ಣಯಿಸಬೇಕು. ಈ ಮಾನದಂಡಗಳು ಸರ್ಕಾರದಲ್ಲಿನ ಪ್ರಾತಿನಿಧ್ಯ ಮತ್ತು ಶಿಕ್ಷಣಕ್ಕೆ ಸೀಮಿತವಾಗಿರಬಾರದು. ಸಾಮಾಜಿಕ ಸ್ಥಾನಮಾನವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಹೇಳಿದೆ.
ಒಳಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದರು. ಆದರೆ ಒಳಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂಕೋರ್ಟ್ ಈಗ ತೆರೆ ಎಳೆದಿದೆ. ರಾಜ್ಯ ಸರ್ಕಾರ ನಿದ್ದೆಯಿಂದ ಎದ್ದು ಆದೇಶ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕಿ ಕೆ. ವಿಜಯಲಕ್ಷ್ಮೀ, ಸಂಚಾಲಕರಾದ ಹನುಮಂತಪ್ಪ, ಪಿ.ಜೆ. ಮಹಾಂತೇಶ, ಕುಬೇಂದ್ರಪ್ಪ ಸೋರಗೊಂಡನಹಳ್ಳಿ, ಚಿತ್ರಲಿಂಗಪ್ಪ ಗಾಂಧಿನಗರ, ಪರಮೇಶ್ ತಾಗಿ, ಚಂದ್ರಪ್ಪ , ಪ್ರದೀಪ್ ಕೆ.ಟಿ.ಜೆ. ನಗರ, ಮಹಾಂತೇಶ ಹಾಲಿವರ್ತಿ, ಹನುಮಂತಪ್ಪ ಗುಮ್ಮನೂರು ಇತರರಿದ್ದರು.
---